ಬಿಹಾರಕ್ಕೆ ನಿಯೋಜಿತ ಚುನಾವಣಾ ವೀಕ್ಷಕರಲ್ಲಿ ಹೆಚ್ಚಿನವರು ಬಿಜೆಪಿ ಆಡಳಿತದ ರಾಜ್ಯಗಳಿಗೆ ಸೇರಿದವರು : ವರದಿ

ಸಾಂದರ್ಭಿಕ ಚಿತ್ರ | AFP
ಹೊಸದಿಲ್ಲಿ,ನ.3: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವೀಕ್ಷಕರಾಗಿ ಗುಜರಾತಿನಿಂದ ಐಎಎಸ್ ಅಧಿಕಾರಿಗಳ ನಿಯೋಜನೆಯ ಬಗ್ಗೆ ಅ.28ರಂದು ಕಳವಳ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷವು, ಮತಗಳ್ಳರು ತಮ್ಮ ಜನರನ್ನು ನಿಮ್ಮಲ್ಲಿಗೆ ಕಳುಹಿಸಿದ್ದಾರೆ ಎಂದು ಬಿಹಾರದ ಜನರಿಗೆ ಎಚ್ಚರಿಕೆ ನೀಡಿತ್ತು. ಸಾಮಾನ್ಯ ವೀಕ್ಷಕರಾಗಿ ಚುನಾವಣೆಯ ಮೇಲ್ವಿಚಾರಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ದೇಶಾದ್ಯಂತದಿಂದ 243 ಐಎಎಸ್ ಅಧಿಕಾರಿಗಳನ್ನು ಬಿಹಾರಕ್ಕೆ ರವಾನಿಸಲಾಗಿದ್ದು, ಈ ಪೈಕಿ 14 ಅಧಿಕಾರಿಗಳು ಗುಜರಾತಿನವರಾಗಿದ್ದಾರೆ ಎಂದು scroll.in ವರದಿ ಮಾಡಿದೆ.
ಈ ಸಂಖ್ಯೆ ಚಿಕ್ಕದಾಗಿ ಕಾಣಬಹುದು, ಆದರೆ ಅದು ದೇಶದಲ್ಲಿ ಪ್ರಸ್ತುತ ಸೇವೆಯಲ್ಲಿರುವ ಒಟ್ಟು ಐಎಎಸ್ ಅಧಿಕಾರಿಗಳಲ್ಲಿ ರಾಜ್ಯದ ಪಾಲಿಗೆ ಅನುಗುಣವಾಗಿಲ್ಲ. ಸರಳವಾಗಿ ಹೇಳುವುದಾದರೆ ಗುಜರಾತ್ನಲ್ಲಿ 255 ಐಎಎಸ್ ಅಧಿಕಾರಿಗಳಿದ್ದಾರೆ. ಆದರೆ ಚುನಾವಣಾ ಆಯೋಗವು ವಿರೋಧ ಪಕ್ಷಗಳ ಆಡಳಿತವಿರುವ ಪಶ್ಚಿಮ ಬಂಗಾಳ ಮತ್ತು ಕರ್ನಾಟಕಕ್ಕಿಂತ ಹೆಚ್ಚಿನ ವೀಕ್ಷಕರನ್ನು ಬಿಹಾರಕ್ಕೆ ಕಳುಹಿಸಿದೆ. ಈ ಎರಡೂ ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಹೊಂದಿವೆ.
ಸರಕಾರ ಮತ್ತು ಚುನಾವಣಾ ಆಯೋಗದ ದತ್ತಾಂಶಗಳನ್ನು ಆಧರಿಸಿ ತಾನು ನಡೆಸಿದ ವಿಶ್ಲೇಷಣೆಯ ಪ್ರಕಾರ, ದೇಶದಲ್ಲಿ ಒಟ್ಟು ಐಎಎಸ್ ಅಧಿಕಾರಿಗಳ ಪೈಕಿ ಕೇವಲ ಶೇ.57ರಷ್ಟನ್ನು ಹೊಂದಿದ್ದರೂ ಗುಜರಾತಿನ ಜೊತೆಗೆ ಇತರ ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ವೀಕ್ಷಕರಲ್ಲಿ ಶೇ.68ರಷ್ಟು ಪಾಲನ್ನು ಹೊಂದಿವೆ. ಇದೇ ರೀತಿ ದೇಶಾದ್ಯಂತ ಒಟ್ಟು ಐಪಿಎಸ್ ಅಧಿಕಾರಿಗಳ ಪೈಕಿ ಕೇವಲ ಶೇ.59ರಷ್ಟು ಬಿಜೆಪಿ ನಿಯಂತ್ರಣದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದರೂ ಬಿಹಾರದ ಶೇ.68ರಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಈ ರಾಜ್ಯಗಳಿಗೆ ಸೇರಿದ ಪೊಲೀಸ್ ವೀಕ್ಷಕರಿದ್ದಾರೆ ಎಂದು ಸುದ್ದಿ ಜಾಲತಾಣ Scrollವರದಿ ಮಾಡಿದೆ.
2020ರ ಬಿಹಾರ ಚುನಾವಣೆಯಲ್ಲಿ ನಿಕಟ ಪೈಪೋಟಿಗೆ ಸಾಕ್ಷಿಯಾಗಿದ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ಶೇ.80ರಷ್ಟು ಪೋಲಿಸ್ ವೀಕ್ಷಕರು ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ಚುನಾವಣೆಗಳಲ್ಲಿ ವೀಕ್ಷಕರು ಚುನಾವಣಾ ಆಯೋಗದ ‘ಕಣ್ಣುಗಳು ಮತ್ತು ಕಿವಿಗಳಂತೆ’ ಕಾರ್ಯ ನಿರ್ವಹಿಸಬೇಕು, ಅವರು ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ, ನಿಷ್ಪಕ್ಷಪಾತ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ.
ಬಿಹಾರದಲ್ಲಿ ನ.6 ಮತ್ತು 11ರಂದು ಮತದಾನ ನಡೆಯಲಿದೆ.
ದತ್ತಾಂಶಗಳು ಏನನ್ನು ತೋರಿಸುತ್ತಿವೆ?
ಚುನಾವಣಾ ಆಯೋಗವು ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಓರ್ವ ಸಾಮಾನ್ಯ ವೀಕ್ಷಕರನ್ನು ಮತ್ತು ರಾಜ್ಯದ 38 ಜಿಲ್ಲೆಗಳಲ್ಲಿ ತಲಾ ಓರ್ವರು ಪೊಲೀಸ್ ವೀಕ್ಷಕರನ್ನು ನಿಯೋಜಿಸಿದೆ.
ಸಣ್ಣ ರಾಜ್ಯಗಳಿಗೆ ಹೋಲಿಸಿದರೆ ಅಧಿಕ ಸಂಖ್ಯೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಹೊಂದಿರುವ ದೊಡ್ಡ ರಾಜ್ಯಗಳು ಬಿಹಾರಕ್ಕೆ ಹೆಚ್ಚಿನ ಸಾಮಾನ್ಯ ವೀಕ್ಷಕರನ್ನು ಕಳುಹಿಸಿವೆ ಎನ್ನುವುದನ್ನು ದತ್ತಾಂಶಗಳು ತೋರಿಸಿವೆ. ಉದಾಹರಣೆಗೆ ಉತ್ತರ ಪ್ರದೇಶವು ಬಿಹಾರಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ವೀಕ್ಷಕರನ್ನು ಕಳುಹಿಸಿದೆ.
ಆದರೆ ಇತರ ದೊಡ್ಡ ರಾಜ್ಯಗಳಿಂದ ಕಡಿಮೆ ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರವು 359 ಐಎಎಸ್ ಅಧಿಕಾರಿಗಳನ್ನು ಹೊಂದಿದ್ದು,ಈ ಪೈಕಿ 20 ಅಧಿಕಾರಿಗಳನ್ನು ಬಿಹಾರ ಚುನಾವಣೆಗಳಿಗೆ ಸಾಮಾನ್ಯ ವೀಕ್ಷಕರಾಗಿ ನಿಯೋಜಿಸಲಾಗಿದೆ. ಆದರೆ ಪಶ್ಚಿಮ ಬಂಗಾಳವು 368 ಐಎಎಸ್ ಅಧಿಕಾರಿಗಳನ್ನು ಹೊಂದಿದ್ದರೂ ಕೇವಲ 10 ಅಧಿಕಾರಿಗಳನ್ನು ಬಿಹಾರಕ್ಕೆ ಕಳುಹಿಸಲಾಗಿದೆ.
ಒಟ್ಟಾರೆಯಾಗಿ ಬಿಜೆಪಿ ಸರಕಾರಗಳ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ವೀಕ್ಷಕರು ಬಿಹಾರದಲ್ಲಿ ಅತಿಯಾದ ಪ್ರಾತಿನಿಧ್ಯವನ್ನು ಹೊಂದಿದ್ದಾರೆ. ಇದರಲ್ಲಿ ಅರುಣಾಚಲ ಪ್ರದೇಶ, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿರುವ ಕೇಂದ್ರ ನಿಯಂತ್ರಿತ AGMUT ಕೇಡರ್ನ ಅಧಿಕಾರಿಗಳು ಸೇರಿದ್ದಾರೆ.







