ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆ

Photo Credit : X
ಹೊಸದಿಲ್ಲಿ, ನ. 20: ಇನ್ಸ್ಟಾಗ್ರಾಂ ಇನ್ ಫ್ಲುಯೆನ್ಸರ್ ಒಬ್ಬರ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ತನ್ನನ್ನು ವಿವಾಹವಾಗುವಂತೆ ಬಲವಂತಪಡಿಸಿದ ಯುವಕನನ್ನು ಆಕೆಯ ಕುಟುಂಬದವರು ಥಳಿಸಿದ್ದರು. ಗಂಭೀರ ಗಾಯಗೊಂಡಿದ್ದ ಆತ ವಾರದ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಇನ್ ಫ್ಲುಯೆನ್ಸರ್ ಗಳ ತಂದೆ ಹಾಗೂ ನೆರೆಹೊರೆಯವರನ್ನು ಬಂಧಿಸಲಾಗಿದೆ.
ಮೃತ ಯುವಕ ಉತ್ತರಪ್ರದೇಶದ ಘಾಜಿಪುರದ ನಿವಾಸಿಯಾಗಿದ್ದು, ಚೆನ್ನೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ನ. 7ರಂದು ಆಕೆಯ ಪೂರ್ವ ದಿಲ್ಲಿಯ ಮಧುವಿಹಾರ್ ನಲ್ಲಿರುವ ನಿವಾಸಕ್ಕೆ ನುಗ್ಗಿದ ಆತ, ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದನೆನ್ನಲಾಗಿದೆ. ರೊಚ್ಚಿಗೆದ್ದ ಬಿಷ್ಟ್ ಅವರ ಕುಟುಂಬದವರು ಹಾಗೂ ನೆರೆಹೊರೆಯವರು ಆತನನ್ನು ಹಿಗ್ಗಾಮಗ್ಗಾ ಥಳಿಸಿದ್ದರು. ಆನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಂಭೀರ ಗಾಯಗೊಂಡ ಆತನನ್ನು ಪೊಲೀಸರು ರಾಜೀವ್ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ನ. 15ರಂದು ಆತ ಕೊನೆಯುಸಿರೆಳೆದಿದ್ದಾನೆ.
ಯುವತಿ ನೇಹಾ ಬಿಷ್ಟ್ ಅವರು ಇನ್ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು, ಆಕೆ ಪೋಸ್ಟ್ ಮಾಡುವ ರೀಲ್ ಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಆಕೆ ಇತ್ತೀಚೆಗೆ ತನ್ನ ವಿವಾಹ ನಿಶ್ಚಿತಾರ್ಥ ಹಾಗೂ ಮುಂಬರುವ ಮದುವೆ ಸಮಾರಂಭಕ್ಕೆ ಸಂಬಂಧಿಸಿದ ರೀಲ್ ಗಳನ್ನು ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ್ದರು.
ಅಭಿನವ್, ಬಿಷ್ಟ್ ಅವರ ರೀಲ್ ಗಳನ್ನು ವೀಕ್ಷಿಸುತ್ತಿದ್ದು, ಆಕೆಯ ಬಗ್ಗೆ ಏಕಮುಖ ಪ್ರೇಮಭಾವನೆಯನ್ನು ಬೆಳೆಸಿಕೊಂಡಿದ್ದ. ಕೆಲವು ತಿಂಗಳುಗಳ ಹಿಂದೆ ಆತ ಅಭಿಮಾನಿಯೆಂದು ಹೇಳಿಕೊಂಡು ಆಕೆಯ ಮನೆಗೆ ಭೇಟಿ ನೀಡಿದ್ದನೆನ್ನಲಾಗಿದೆ.






