ಒಡಿಶಾ | ಕಾಲೇಜು ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ ಪ್ರಕರಣ : ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಾಧ್ಯಾಪಕನ ಬಂಧನ
ಪ್ರಕರಣದ ತನಿಖೆ ನಡೆಸಲು ಸಮಿತಿ ರಚಿಸಿದ ಒಡಿಶಾ ಸರಕಾರ

PC : indiatoday.in
ಭುವನೇಶ್ವರ : ಬಿಎಡ್ ವಿದ್ಯಾರ್ಥಿನಿಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ನಂತರ ಬಾಲಸೋರ್ನ ಎಫ್ಎಂ ಸ್ವಾಯತ್ತ ಕಾಲೇಜಿನ ಸಹಾಯಕ ಪ್ರಾಧ್ಯಾಪಕನಾಗಿರುವ ಸಮೀರ ಕುಮಾರ್ ಸಾಹು ಎಂಬಾತನನ್ನು ಬಂಧಿಸಲಾಗಿದೆ. ಆತನ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಲು ಒಡಿಶಾ ಸರಕಾರ ಸಮಿತಿಯನ್ನು ರಚಿಸಿದೆ.
ಒಡಿಶಾ ಸರಕಾರದ ಉನ್ನತ ಶಿಕ್ಷಣ ಇಲಾಖೆ ಆರೋಪಿ ಸಮೀರ ಕುಮಾರ್ ಸಾಹು ಮತ್ತು ಕಾಲೇಜಿನ ಪ್ರಾಂಶುಪಾಲರಾದ ದಿಲೀಪ್ ಕುಮಾರ್ ಘೋಷ್ ಅವರನ್ನು ಅಮಾನತುಗೊಳಿಸಿದೆ.
ಬಾಲಸೋರ್ನ ಸರಕಾರಿ ಕಾಲೇಜಿನ ಬಿ.ಎಡ್ ವಿದ್ಯಾರ್ಥಿನಿಯೋರ್ವರು ಕಾಲೇಜಿನ ಸಹಾಯಕ ಪ್ರಾಧ್ಯಾಪಕನಾಗಿರುವ ಸಮೀರ ಕುಮಾರ್ ಸಾಹು ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಧ್ಯಾಪಕನ ವಿರುದ್ಧ ಆಕೆ ಈ ಹಿಂದೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಳು ಮತ್ತು ಪ್ರತಿಭಟನೆಯನ್ನು ಕೂಡ ನಡೆಸಿದ್ದಳು.
ಶೇಕಡಾ 90ರಷ್ಟು ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಭುವನೇಶ್ವರದ ಏಮ್ಸ್ಗೆ ದಾಖಲಿಸಲಾಗಿದೆ.





