ಒಡಿಶಾ| ಗಣರಾಜ್ಯೋತ್ಸವದಂದು ಮಾಂಸ, ಮೀನು, ಮೊಟ್ಟೆ ಮಾರಾಟ ನಿಷೇಧಿಸಿದ ಜಿಲ್ಲಾಡಳಿತ!

ಭುವನೇಶ್ವರ, ಜ. 24: ಗಣರಾಜ್ಯೋತ್ಸವ ದಿನವಾದ ಸೋಮವಾರ ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಿ ಒಡಿಶಾದ ಕೊರಾಪುಟ್ ಜಿಲ್ಲಾಡಳಿತವು ಶನಿವಾರ ಆದೇಶ ಹೊರಡಿಸಿದೆ ಹಾಗೂ ‘‘ಗೌರವದ ದ್ಯೋತಕವಾಗಿ’’ ಆ ದಿನ ಸಸ್ಯಾಹಾರ ಸೇವಿಸುವಂತೆ ಜನರಿಗೆ ಸೂಚಿಸಿದೆ.
‘‘ರಾಷ್ಟ್ರೀಯ ಹಬ್ಬವನ್ನು ಏಕರೀತಿಯಲ್ಲಿ ಆಚರಿಸುವುದಕ್ಕಾಗಿ’’ ಜಿಲ್ಲಾಧಿಕಾರಿ ಮನೋಜ್ ಸತ್ಯಬಾನ್ ಮಹಾಜನ್ ಕ್ಷೇತ್ರಾಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರರು ಮತ್ತು ಕಾರ್ಯಕಾರಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕಳುಹಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶನವು ಅಧಿಕಾರಿಗಳಿಗೆ ಸೂಚಿಸುತ್ತದೆ.
ಕೊರಾಪುಟ್ ಜಿಲ್ಲಾಧಿಕಾರಿಯ ಈ ಆದೇಶವು ಸಂವಿಧಾನದ 14 ಮತ್ತು 15ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ವಕೀಲ ಸತ್ಯವಾದಿ ಮೊಹಾಪಾತ್ರ ಹೇಳುತ್ತಾರೆ. ಈ ವಿಧಿಗಳು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ನಿಷೇಧಿಸುತ್ತವೆ ಮತ್ತು ಸಮಾನತೆಯನ್ನು ಖಾತರಿಪಡಿಸುತ್ತವೆ ಎಂದು ಅವರು ಹೇಳಿದ್ದಾರೆ.
‘‘ಗಣರಾಜ್ಯೋತ್ಸವವು ರಾಷ್ಟ್ರೀಯ ಹಬ್ಬವಾಗಿದೆ, ಅದು ಧಾರ್ಮಿಕ ಹಬ್ಬವಲ್ಲ’’ ಎಂದು ಹೇಳಿದ ಅವರು, ಸಾಂವಿಧಾನಿಕ ಮೌಲ್ಯಗಳ ಆಚರಣೆಯ ವೇಳೆ ಆಹಾರ ಆಯ್ಕೆಗಳನ್ನು ಜನರ ಮೇಲೆ ಯಾಕೆ ಹೇರಬೇಕು ಎಂದು ಪ್ರಶ್ನಿಸಿದರು.







