ಒಡಿಶಾ | ಫೆವಿಕ್ವಿಕ್ ಹಾಕಿದ ಸಹಪಾಠಿಗಳು : 8 ವಿದ್ಯಾರ್ಥಿಗಳ ಕಣ್ಣಿಗೆ ಹಾನಿ

Photo : indiatoday
ಭುವನೇಶ್ವರ, ಸೆ.13: ಒಡಿಶಾದ ಕಂಧಮಾಲ್ ಜಿಲ್ಲೆಯ ಹಾಸ್ಟೆಲೊಂದರ 8 ವಿದ್ಯಾರ್ಥಿಗಳು ಮಲಗಿದ್ದಾಗ ಕೆಲವು ಸಹಪಾಠಿಗಳು ಫೆವಿಕ್ವಿಕ್ ಹಾಕಿದ ಪರಿಣಾಮ ಅವರ ಕಣ್ಣುಗಳಿಗೆ ಹಾನಿ ಉಂಟಾಗಿದೆ.
ಈ ಘಟನೆ ಫಿರಿಂಗಿಯಾ ಬ್ಲಾಕ್ನ ಸಲಗುಡಾದಲ್ಲಿರುವ ಸೇವಾಶ್ರಮ ಶಾಲೆಯಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದೆ. ಫೆವಿಕ್ವಿಕ್ ಹಾಕಿರುವುದರಿಂದ ವಿದ್ಯಾರ್ಥಿಗಳಿಗೆ ಕಣ್ಣು ತೆರೆಯಲು ಸಾಧ್ಯವಾಗಿಲ್ಲ. ಅವರನ್ನು ಮೊದಲು ಗೋಛಾಪಾಡಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಂತರ ಹೆಚ್ಚಿನ ಚಿಕಿತ್ಸೆಗೆ ಫುಲ್ಬನಿಯಲ್ಲಿರುವ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು ಮೂಲಗಳು ತಿಳಿಸಿವೆ.
ಅಂಟು ಕಣ್ಣಿಗೆ ಹಾನಿ ಉಂಟು ಮಾಡಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿರುವುದರಿಂದ ಹೆಚ್ಚು ಅಪಾಯವನ್ನು ತಪ್ಪಿಸಲು ಸಾಧ್ಯವಾಯಿತು. ಓರ್ವ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲೆಯ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹು ಅವರನ್ನು ಅಮಾನತುಗೊಳಿಸಿದೆ. ಹಾಸ್ಟೆಲ್ ಒಳಗೆ ಈ ಘಟನೆ ಹೇಗೆ ಸಂಭವಿಸಿತು ಎಂದು ನಿರ್ಧರಿಸಲು ಹಾಗೂ ವಾರ್ಡನ್, ಅಧೀಕ್ಷರ ಸಹಿತ ಸಿಬ್ಬಂದಿಯ ಪಾತ್ರವನ್ನು ಪರಿಶೀಲಿಸಲು ತನಿಖೆ ಆರಂಭಿಸಲಾಗಿದೆ.
ವಿದ್ಯಾರ್ಥಿಗಳು ಅಂಟನ್ನು ಕ್ಯಾಂಪಸ್ಸಿನ ಒಳಗೆ ಹೇಗೆ ತಂದರು. ಈ ಕೃತ್ಯದ ಉದ್ದೇಶ ಏನು ಎಂಬ ಬಗ್ಗೆ ಕೂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಂಧಮಾಲ್ನ ಕಲ್ಯಾಣಾಧಿಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿ ಈ ಕುರಿತ ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ.







