ಒಡಿಶಾ ನವ ದಂಪತಿಯನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲ ಉಳುವಂತೆ ಬಲವಂತ : ವೀಡಿಯೊ ವೈರಲ್

Photo | X
ಭುವನೇಶ್ವರ : ಒಡಿಶಾದಲ್ಲಿ ಸ್ಥಳೀಯ ಸಾಮಾಜಿಕ ರೂಢಿಗೆ ವಿರುದ್ಧವಾಗಿ ವಿವಾಹವಾದ ಜೋಡಿಯನ್ನು ಗುಂಪೊಂದು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲವನ್ನು ಉಳುವಂತೆ ಬಲವಂತ ಮಾಡಿದೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಡಿಶಾದ ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದಲ್ಲಿ ಇತ್ತೀಚೆಗೆ ಜೋಡಿಯೊಂದು ಪ್ರೀತಿಸಿ ವಿವಾಹವಾಗಿತ್ತು. ಯುವತಿ ಮತ್ತು ಯುವಕ ಹತ್ತಿರದ ಸಂಬಂಧಿಕರಾಗಿದ್ದರು. ಇದಕ್ಕೆ ಕೆಲವು ಗ್ರಾಮಸ್ಥರು ವಿರೋಧವನ್ನು ವ್ಯಕ್ತಪಡಿಸಿದ್ದರು. ಸ್ಥಳೀಯ ಪದ್ಧತಿಗಳ ಪ್ರಕಾರ ಅಂತಹ ಮದುವೆಯನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ ಎಂದು ವರದಿಯಾಗಿದೆ.
ಇದರಿಂದಾಗಿ ನವ ದಂಪತಿಗೆ ಶಿಕ್ಷೆಯನ್ನು ವಿಧಿಸುವ ಸಲುವಾಗಿ ಅವರನ್ನು ಬಲವಂತವಾಗಿ ಮರದ ನೊಗಕ್ಕೆ ಕಟ್ಟಿ ಹೊಲದಲ್ಲಿ ಎಳೆದುಕೊಂಡು ಹೋಗಲಾಗಿದೆ. ಇಬ್ಬರು ನವ ದಂಪತಿಗೆ ಕೋಲಿನಿಂದ ಹೊಡೆಯುತ್ತಿರುವುದು ಕೂಡ ವೀಡಿಯೊದಲ್ಲಿ ಸೆರೆಯಾಗಿದೆ.
ಸಾರ್ವಜನಿಕವಾಗಿ ಶಿಕ್ಷೆಯನ್ನು ವಿಧಿಸಿದ ಬಳಿಕ ದಂಪತಿಯನ್ನು ಗ್ರಾಮದ ದೇವಾಲಯಕ್ಕೆ ಕರೆದೊಯ್ದು ಅವರ ಪಾಪವನ್ನು ಶುದ್ದೀಕರಿಸಲು ಶುದ್ಧೀಕರಣ ವಿಧಿಗಳನ್ನು ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸ್ವಾತಿ ಕುಮಾರ್ ಪ್ರತಿಕ್ರಿಯಿಸಿ, ಪೊಲೀಸರ ತಂಡವೊಂದು ಗ್ರಾಮಕ್ಕೆ ಭೇಟಿ ನೀಡಿದೆ. ಪ್ರಕರಣ ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.







