“ಇಸ್ಲಾಮಿಕ್ ಸಂಸ್ಕೃತಿಗೂ ಯುರೋಪಿಯನ್ ಮೌಲ್ಯಗಳಿಗೂ ಹೊಂದಾಣಿಕೆಯಾಗದು” ಎಂದ ಇಟಲಿ ಪ್ರಧಾನಿಯ ಹಳೆ ವೀಡಿಯೋ ಮತ್ತೆ ಸುದ್ದಿಯಲ್ಲಿ

ಜಾರ್ಜಿಯಾ ಮೆಲೊನಿ| Photo: indiatoday.in
ಹೊಸದಿಲ್ಲಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದರಲ್ಲಿ ಅವರು ಇಸ್ಲಾಮಿಕ್ ಸಂಸ್ಕೃತಿಯು ಯುರೋಪಿಯನ್ ಮೌಲ್ಯಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇಟಲಿಯಲ್ಲಿ ಶರೀಯ ಕಾನೂನಿನ ಜಾರಿಗೆ ಅನುಮತಿ ನೀಡಲಾಗದು ಎಂಬ ಕುರಿತೂ ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇಸ್ಲಾಮಿಕ್ ಸಂಸ್ಕೃತಿ ಹಾಗೂ ಮೌಲ್ಯಗಳು ಮತ್ತು ಯುರೋಪಿಯನ್ ನಾಗರಿಕತೆಯ ಹಕ್ಕುಗಳು “ಹೊಂದಾಣಿಕೆಯ ಸಮಸ್ಯೆ” ಹೊಂದಿವೆ ಎಂಬುದು ಇಟಲಿಯ ಪ್ರಧಾನಿಯ ಅಭಿಪ್ರಾಯವಾಗಿದೆ.
“ಇಟಲಿಯಲ್ಲಿ ಶರೀಯ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ. ನಮ್ಮ ನಾಗರಿಕತೆಯ ಮೌಲ್ಯಗಳು ಭಿನ್ನ” ಎಂದು ಹಳೆಯ ವೀಡಿಯೋವೊಂದರಲ್ಲಿ ಮೆಲೋನಿ ಹೇಳಿಕೊಂಡಿರುವುದು ಈಗ ಮತ್ತೆ ಸುದ್ದಿಯಾಗುತ್ತಿದೆ.
“ಇಟಲಿಯಲ್ಲಿರುವ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳಿಗೆ ಸೌದಿ ಅರೇಬಿಯಾ ಧನಸಹಾಯ ಮಾಡಿದೆ ಎಂಬುದು ನನಗೆ ಗೊತ್ತಿದೆ” ಎಂದೂ ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಕಟ್ಟುನಿಟ್ಟಿನ ಶರೀಯ ಕಾನೂನನ್ನೂ ಅವರು ಟೀಕಿಸಿದ್ದಾರೆ.
“ಶರೀಯ ಕಾನೂನು ಮತ್ತು ಶರೀಯ ಎಂದರೆ ಅಕ್ರಮ ಸಂಬಂಧಕ್ಕೆ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ಮತ್ತು ಸಲಿಂಗಕಾಮಕ್ಕೆ ಮರಣದಂಡನೆ. ಯುರೋಪ್ನಲ್ಲಿ ಇಸ್ಲಾಮೀಕರಣದ ಪ್ರಕ್ರಿಯೆಯು ನಮ್ಮ ನಾಗರಿಕತೆಯ ಮೌಲ್ಯಗಳಿಂದ ಬಹಳ ದೂರವಿದೆ” ಎಂದು ಅವರು ಹೇಳಿದ್ದಾರೆ.
ಈ ವೀಡಿಯೋದಲ್ಲಿ ಮೆಲೊನಿ ಇಟಾಲಿಯನ್ ಭಾಷೆಯಲ್ಲಿ ಮಾತನಾಡಿದ್ದಾರೆ.
ಮೆಲೊನಿ ಅವರ ಬಲಪಂಥೀಯ ಪಕ್ಷ ದಿ ಬ್ರದರ್ಸ್ ಆಫ್ ಇಟಲಿ ರೋಮ್ನಲ್ಲಿ ರಾಜಕೀಯ ಉತ್ಸವವನ್ನು ಡಿಸೆಂಬರ್ 16ರಂದು ಆಯೋಜಿಸಿದ ಬೆನ್ನಲ್ಲಿ ಈ ಹಳೆ ವೀಡಿಯೋ ಸುದ್ದಿಯಾಗಿದೆ. ರಾಜಕೀಯ ಹಬ್ಬದಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರೂ ಭಾಗವಹಿಸಿದ್ದರು.







