IIT ಬಾಂಬೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ | ಪರೀಕ್ಷೆಯ ವೇಳೆ ಸಾಹಿಲ್ ರನ್ನು ಪಕ್ಕಕ್ಕೆ ಕರೆದೊಯ್ದ ಪ್ರಾಧ್ಯಾಪಕ; CCTV ದೃಶ್ಯಾವಳಿಯಲ್ಲಿ ಬಹಿರಂಗ

Photo Credit : NDTV
ಮುಂಬೈ: IIT ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ಗಂಟೆಗಳ ಮೊದಲು ಪರೀಕ್ಷಾ ಕೊಠಡಿಯಲ್ಲಿ ನಡೆದ ಘಟನೆಗಳ CCTV ದೃಶ್ಯಾವಳಿ ಬಹಿರಂಗಗೊಂಡಿದೆ. ಪರೀಕ್ಷಾ ಕೊಠಡಿಯ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ವಾಕೋಡೆ ಅವರನ್ನು ಪರೀಕ್ಷಾ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ತಡೆದು ಪಕ್ಕಕ್ಕೆ ಕರೆದೊಯ್ದಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಕಳೆದ ಶುಕ್ರವಾರ (ಸೆಪ್ಟೆಂಬರ್ 18) ಪರೀಕ್ಷೆ ನಡೆಯುತ್ತಿದ್ದಾಗ ವಾಕೋಡೆ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಪತ್ತೆಯಾಗಿತ್ತು ಎಂದು IIT ಬಾಂಬೆ ಈ ಹಿಂದೆ ತಿಳಿಸಿತ್ತು. ಇದೀಗ ಹೊರಬಂದಿರುವ CCTV ದೃಶ್ಯಾವಳಿಯಲ್ಲಿ ಘಟನೆಯ ಸರಣಿ ದಾಖಲಾಗಿದ್ದು, ಪರೀಕ್ಷೆಯ ಕೊನೆಯ 20 ನಿಮಿಷಗಳಲ್ಲಿ ಏನಾಯಿತು ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಈ ದೃಶ್ಯಾವಳಿಗಳು ಪ್ರಮುಖ ಸಾಕ್ಷ್ಯವಾಗಿವೆ.
ಕಪ್ಪು ಟಿ-ಶರ್ಟ್ ಧರಿಸಿದ್ದ ಸಮೀರ್ ವಾಕೋಡೆ ಅವರು ಪರೀಕ್ಷಾ ಕೊಠಡಿಯ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು. ಈ ವೇಳೆ ಪ್ರೊ. ದೂಲ್ಲಾ ಅವರ ಬಳಿ ಬಂದು ಮಾತನಾಡಿದ್ದಾರೆ. ಸಮೀರ್ ಕೆಲ ಸಮಯ ಬೆಂಚ್ನಿಂದ ಎದ್ದು ನಿಂತು, ಮತ್ತೆ ಕುಳಿತಿದ್ದಾರೆ. ಬಳಿಕ ತಮ್ಮ ಮೊಬೈಲ್ ಫೋನ್ ಅನ್ನು ದೂಲ್ಲಾ ಅವರಿಗೆ ಹಸ್ತಾಂತರಿಸಿದ್ದಾರೆ.
ಸಮೀರ್ ವಾಕೋಡೆ ಮತ್ತು ದೂಲ್ಲಾ ನಡುವಿನ ಸಂಭಾಷಣೆ ಕೆಲ ಸಮಯ ಮುಂದುವರಿದಿದೆ. ನಂತರ ವಾಕೋಡೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಪರೀಕ್ಷಾ ಕೊಠಡಿಯಿಂದ ಹೊರಗೆ ತೆರಳಿರುವುದು ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಇದಾದ ಕೆಲವು ಗಂಟೆಗಳ ಬಳಿಕ 22 ವರ್ಷದ ದ್ವಿತೀಯ ವರ್ಷದ ವಿದ್ಯಾರ್ಥಿ ಸಮೀರ್ ವಾಕೋಡೆ ಅವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸಿದ್ದ IIT ಬಾಂಬೆ, ಅಂದು ಪರೀಕ್ಷೆಯ ವೇಳೆ ವಾಕೋಡೆ ಅವರು ಮೊಬೈಲ್ ಫೋನ್ ಬಳಸುತ್ತಿರುವುದು ಪತ್ತೆಯಾಗಿತ್ತು ಎಂದು ತಿಳಿಸಿತ್ತು. ಉತ್ತರಗಳನ್ನು ಪಡೆಯುವ ಉದ್ದೇಶದಿಂದ ಅವರು ಪ್ರಶ್ನೆಪತ್ರಿಕೆಯನ್ನು ChatGPTಗೆ ಅಪ್ಲೋಡ್ ಮಾಡಿದ್ದರು ಎಂದು ಹೇಳಿತ್ತು. ಆದರೆ, ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿರಲಿಲ್ಲ ಎಂದೂ ತಿಳಿಸಿತ್ತು.
ಸಮೀರ್ ವಾಕೋಡೆ ಅವರು ಸಂಸ್ಥೆಯಲ್ಲಿ ಕಿರುಕುಳ ಮತ್ತು ಜಾತಿ ತಾರತಮ್ಯ ಎದುರಿಸುತ್ತಿದ್ದರು ಎಂದು ಅವರ ಪೋಷಕರು ಆರೋಪಿಸಿದ್ದಾರೆ. ತಮ್ಮ ಮಗ ಜಾತಿ ತಾರತಮ್ಯದ ಬಗ್ಗೆ ತಮಗೆ ತಿಳಿಸಿದ್ದ ಎಂದು ತಂದೆ ರವೀಂದ್ರ ವಾಕೋಡೆ ಹೇಳಿದ್ದಾರೆ. ತಮ್ಮ ಮಗನ ವಿರುದ್ಧ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರೊ. ದೂಲ್ಲಾ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಡೂಲ್ಲಾ ನನ್ನ ಮಗನ ವಿರುದ್ಧ ತಾರತಮ್ಯ ಮಾಡುತ್ತಿದ್ದರು. ನನ್ನ ಮಗ ಈ ತಾರತಮ್ಯದ ಬಗ್ಗೆ ನನಗೆ ಹೇಳಿದ್ದ. ಆದರೆ, IITಯಲ್ಲಿ ಪ್ರವೇಶ ಪಡೆಯುವುದು ಕಷ್ಟ ಎಂದು ನಾನು ಅವನಿಗೆ ಹೇಳಿದ್ದೆ. ಅದನ್ನು ಸಹಿಸಿಕೊಳ್ಳುವಂತೆ ತಿಳಿಸಿದ್ದೆ’ ಎಂದು ರವೀಂದ್ರ ವಾಕೋಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
IIT ಬಾಂಬೆಯ ಬೋಧಕವರ್ಗವು ಪ್ರೊ. ದೂಲ್ಲಾ ಅವರ ಪರವಾಗಿ ನಿಂತಿದೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಅವರನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಅಧ್ಯಾಪಕರು ಹೇಳಿದ್ದಾರೆ.
‘ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯು ಅಕ್ರಮ ಎಸಗಿದ್ದರು. ಪ್ರೊ. ದೂಲ್ಲಾ ಅವರು ಈ ವಿಷಯವನ್ನು ವಿಭಾಗದ ಮುಖ್ಯಸ್ಥರಿಗೆ ವರದಿ ಮಾಡಿದ್ದರು. ಕೇವಲ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಒಬ್ಬ ಪ್ರಾಧ್ಯಾಪಕರನ್ನು ಹೀಗೆ ನಿಂದಿಸಲಾಗುತ್ತಿದ್ದರೆ, ಅದು ದೇಶದ ಸಮಸ್ತ ಬೋಧಕ ಸಮುದಾಯಕ್ಕೇ ಒಂದು ಸಮಸ್ಯೆಯಾಗಿದೆ’ ಎಂದು IIT ಬಾಂಬೆ ಅಧ್ಯಾಪಕರ ವೇದಿಕೆಯ ಮುಖ್ಯಸ್ಥ ಪ್ರೊ. ರಾಜ್ಕುಮಾರ್ ಪಂತ್ NDTVಗೆ ತಿಳಿಸಿದ್ದಾರೆ.
ವಿವಾದದ ಬಳಿಕ IIT ಬಾಂಬೆ, ಪ್ರೊ. ದೂಲ್ಲಾ ಅವರನ್ನು ಡೀನ್ ಹುದ್ದೆಯಿಂದ ತೆಗೆದುಹಾಕಿದೆ. ಅವರನ್ನು ರಜೆಯ ಮೇಲೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮೀರ್ ವಾಕೋಡೆ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಬಳಿಕ ಹಲವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.






