ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಓರ್ವ ಶಂಕಿತ ವಶಕ್ಕೆ

ಟೈಗರ್ ಶ್ರಾಫ್ (Photo: PTI)
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನತ್ತ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಸಂಜೆ ಜುಹು ಪ್ರದೇಶದ ಫುಟ್ಬಾಲ್ ಮೈದಾನದಿಂದ ನಟ ಹೊರಬರುತ್ತಿದ್ದಾಗ ಅವರ ಕಾರಿನತ್ತ ಅಪರಿಚಿತ ದುಷ್ಕರ್ಮಿಗಳು ಹಲವು ಬಾರಿ ಗುಂಡು ಹಾರಿಸಿದ್ದರು. ಘಟನೆಯಲ್ಲಿ ನಟನ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಆಡಿಯೊ ಕ್ಲಿಪ್
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೊ ಕ್ಲಿಪ್ ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ದಾಳಿಯ ಹೊಣೆ ಹೊತ್ತಿದ್ದಾನೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ತನ್ನನ್ನು ಅನಿಲ್ ಪಂಡಿತ್ ಎಂದು ಗುರುತಿಸಿಕೊಂಡಿರುವ ಆ ವ್ಯಕ್ತಿ, ಟೈಗರ್ ಶ್ರಾಫ್ ತಮ್ಮ ಗುಂಪಿನ 'ಟಾರ್ಗೆಟ್ ಲಿಸ್ಟ್'ನಲ್ಲಿದ್ದರು ಎಂದು ಹೇಳಿಕೊಂಡಿದ್ದಾನೆ. ನಮ್ಮ ಸೂಚನೆಗಳನ್ನು ಪಾಲಿಸದ ಕಾರಣ ಮತ್ತು ನಟ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಕಾರಣಕ್ಕೆ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಆತ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.






