ಉತ್ತರಾಖಂಡ | ಏಕರೂಪ ನಾಗರಿಕ ಸಂಹಿತೆಯಡಿ ಕೇವಲ ಒಂದೇ ಜೋಡಿಯಿಂದ ನೋಂದಣಿ!

Photo | freepik.com
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಪೋರ್ಟಲ್ ಕಾರ್ಯರೂಪಕ್ಕೆ ಬಂದ ಮೊದಲ 10 ದಿನಗಳಲ್ಲಿ ಕೇವಲ ಒಂದೇ ಒಂದು ಜೋಡಿ ʼಲಿವ್-ಇನ್ ಸಂಬಂಧʼದ ಪ್ರಕರಣ ನೋಂದಾಯಿಸಲ್ಪಟ್ಟಿದೆ ಎಂದು ವರದಿಯಾಗಿದೆ.
ಕಡ್ಡಾಯ ನೋಂದಣಿಗಾಗಿ ಲೈವ್-ಇನ್ ಸಂಬಂಧದಲ್ಲಿದ್ದ ಐದು ಜೋಡಿಯಿಂದ ಅರ್ಜಿಗಳು ಬಂದಿವೆ. ಅದರಲ್ಲಿ ಒಂದನ್ನು ನೋಂದಣಿ ಮಾಡಲಾಗಿದೆ. ಇತರ ನಾಲ್ಕು ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದ ಉತ್ತರಾಖಂಡ ಜನವರಿ 27ರಂದು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದಿದೆ. ಆ ಮೂಲಕ ಸ್ವತಂತ್ರ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದ ಮೊದಲ ರಾಜ್ಯವಾಗಿದೆ. ಏಕರೂಪ ನಾಗರಿಕ ಸಂಹಿತೆ ಮೂಲಕ ಎಲ್ಲಾ ಧರ್ಮಗಳ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಕಾನೂನುಗಳು ಅನ್ವಯವಾಗಲಿದೆ. ಜನವರಿ 27ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ವಿವಾಹ, ವಿಚ್ಛೇದನ ಮತ್ತು ಲಿವ್-ಇನ್ ಸಂಬಂಧಗಳ ಕಡ್ಡಾಯ ಆನ್ ಲೈನ್ ನೋಂದಣಿಗಾಗಿ ವಿನ್ಯಾಸಗೊಳಿಸಲಾದ ಪೋರ್ಟಲ್ ಗೆ ಚಾಲನೆ ನೀಡಿದ್ದರು.