'ಆಪರೇಷನ್ ಸಫೇದ್ ಸಾಗರ್'ನಿಂದ ಇಂದಿನವರೆಗೆ: ಆಗಸದಿಂದ ಶತ್ರುಪಡೆಗಳ ಮೇಲೆ ಭಾರತ ಕಣ್ಣಿಡುವುದು ಹೇಗೆ?

Photo Credit : imdb.com
1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆ (IAF) ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿದ 'ಆಪರೇಷನ್ ಸಫೇದ್ ಸಾಗರ್' ವೆಬ್ ಸರಣಿಯು ಆ ಸಮಯದಲ್ಲಿ No. 17 ‘Golden Arrows’ ಸ್ಕ್ವಾಡ್ರನ್ ನಡೆಸಿದ ಫೋಟೋ-ರಿಕಾನಸನ್ಸ್ (ಫೋಟೋ ಆಧಾರಿತ ಗೂಢಚರ್ಯೆ) ಕಾರ್ಯಾಚರಣೆಗಳನ್ನು ಬೆಳಕಿಗೆ ತಂದಿದೆ.
ಮಿಗ್-21 ಯುದ್ಧ ವಿಮಾನಗಳನ್ನು ಹೊಂದಿದ್ದ ಈ ಸ್ಕ್ವಾಡ್ರನ್, ಅನೇಕ ಫೋಟೋ-ರಿಕಾನಸನ್ಸ್ ಹಾರಾಟಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಭಾರತೀಯ ವಾಯುಪಡೆಯ ಇತರ ಯುದ್ಧ ವಿಮಾನ ಪಡೆಗಳು ನಡೆಸಿದ ಈ ಕಾರ್ಯಾಚರಣೆಗಳು, ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಪಾಕಿಸ್ತಾನಿ ಪಡೆಯು ಎಷ್ಟರಮಟ್ಟಿಗೆ ಅತಿಕ್ರಮಣ ಮಾಡಿದೆ ಎಂಬುದನ್ನು ಗುರುತಿಸಲು ಅತ್ಯಂತ ನಿರ್ಣಾಯಕವಾಗಿದ್ದವು.
ಏನಿದು ಫೋಟೋ-ರಿಕಾನಸನ್ಸ್ ಕಾರ್ಯಾಚರಣೆ? ಇವು ಏಕೆ ಪ್ರಮುಖವಾಗಿವೆ ಮತ್ತು ಡ್ರೋನ್ ಹಾಗೂ ಉಪಗ್ರಹಗಳ ಆಗಮನದೊಂದಿಗೆ ಇವು ಕಾಲಕ್ರಮೇಣ ಹೇಗೆ ಬದಲಾಗಿವೆ? ಇಲ್ಲಿದೆ ವಿವರ.
►ಯುದ್ಧ ವಿಮಾನಗಳ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆ ಎಂದರೇನು?
ಫೋಟೋ-ರಿಕಾನಸನ್ಸ್ ಕಾರ್ಯಾಚರಣೆ ಎಂದರೆ, ಯುದ್ಧ ವಿಮಾನಗಳು ಶತ್ರುಗಳ ಮೇಲಿಂದ ದಾಳಿ ಮಾಡುವ ಬದಲು, ಅವರ ಪ್ರದೇಶ, ಸೇನಾ ನೆಲೆಗಳು ಅಥವಾ ಚಟುವಟಿಕೆಗಳ ಛಾಯಾಚಿತ್ರಗಳನ್ನು ತೆಗೆದು ಗೂಢಚರ್ಯೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಾಗಿದೆ.
ಇದು ದಾಳಿ ಮತ್ತು ವಾಯು ರಕ್ಷಣೆ ಕಾರ್ಯಾಚರಣೆಗಳಿಗಿಂತ ಸಂಪೂರ್ಣ ಭಿನ್ನ. ದಾಳಿ ಕಾರ್ಯಾಚರಣೆಯ ಉದ್ದೇಶ ನಿರ್ದಿಷ್ಟ ಗುರಿಯನ್ನು ನಾಶಪಡಿಸುವುದಾಗಿದ್ದರೆ, ವಾಯು ರಕ್ಷಣೆಯ ಉದ್ದೇಶ ಶತ್ರು ವಿಮಾನಗಳನ್ನು ಗುರುತಿಸಿ ಎದುರಿಸುವುದಾಗಿದೆ. ಆದರೆ, ಫೋಟೋ-ರಿಕಾನಸನ್ಸ್ ವಿಮಾನವು ಅಪಾಯಕಾರಿ ಅಥವಾ ಶತ್ರುಗಳ ವ್ಯಾಪ್ತಿಯಲ್ಲಿರುವ ಪ್ರದೇಶಕ್ಕೆ ಹಾರಿ, ಅಗತ್ಯ ಚಿತ್ರಗಳನ್ನು ಸೆರೆಹಿಡಿದು ಸುರಕ್ಷಿತವಾಗಿ ಹಿಂತಿರುಗುತ್ತದೆ.
ಸಾಮಾನ್ಯವಾಗಿ ಈ ಕಾರ್ಯಾಚರಣೆಗಳನ್ನು ಶತ್ರುಗಳ ನೆಲೆಗಳ ನಕ್ಷೆ ತಯಾರಿಸಲು, ಮುಂದಿನ ದಾಳಿಗೆ ಸೂಕ್ತ ಗುರಿಗಳನ್ನು ಗುರುತಿಸಲು, ದಾಳಿಯ ನಂತರ ಆಗಿರುವ ಹಾನಿಯನ್ನು ಅಂದಾಜಿಸಲು, ಮಿಲಿಟರಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಹಾಗೂ ಶತ್ರುಪಡೆಯ ಸಿದ್ಧತೆಗಳ ಕುರಿತು ಗೂಢಚರ್ಯೆ ಮಾಹಿತಿಯನ್ನು ನವೀಕರಿಸಲು ಬಳಸಲಾಗುತ್ತದೆ.
ಇದರ ಜೊತೆಗೆ, ಸವಾಲಿನ ಅಥವಾ ಸಂಘರ್ಷ ಪೀಡಿತ ಪ್ರದೇಶಗಳ ಭೂಪ್ರದೇಶ ಮತ್ತು ಮಾರ್ಗಗಳನ್ನು ಪರಿಶೀಲಿಸಲು, ಕಾರ್ಯಾಚರಣೆಯ ನಂತರದ ಹಾನಿಯನ್ನು ಮೌಲ್ಯಮಾಪನ ಮಾಡಲು ಮತ್ತು ಮುಂದಿನ ಕಾರ್ಯಾಚರಣೆಗೆ ಅಗತ್ಯವಾದ ಮಾರ್ಗಗಳು ಹಾಗೂ ಗುರಿಗಳ ಮಾಹಿತಿ ಸಂಗ್ರಹಿಸಲು ಇವು ಸಹಕಾರಿಯಾಗಿವೆ.
ಅಷ್ಟೇ ಅಲ್ಲದೆ, ಪತನಗೊಂಡ ವಿಮಾನಗಳ ಅವಶೇಷಗಳನ್ನು ಪತ್ತೆಹಚ್ಚಲು ಸಹ ಈ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.
►ಯಾವ ವಿಮಾನಗಳು ಮತ್ತು ಸ್ಕ್ವಾಡ್ರನ್ಗಳು ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗೆ ಸೀಮಿತವಾಗಿದ್ದವು?
ಹಿಂದಿನ ಕ್ಯಾನ್ಬೆರಾ PR.57/67 ಮತ್ತು ಮಿಗ್-25R ಸ್ಕ್ವಾಡ್ರನ್ಗಳು ಸಂಪೂರ್ಣವಾಗಿ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗೆಂದೇ ಮೀಸಲಾಗಿದ್ದವು. ಇವುಗಳನ್ನು ಹೊರತುಪಡಿಸಿ, ಜಾಗ್ವಾರ್, ಮಿಗ್-21, ಮಿಗ್-27, ಮಿರಾಜ್ 2000 ಮತ್ತು ಆಧುನಿಕ ಸುಖೋಯ್-30 (Su-30) ವಿಮಾನಗಳನ್ನು ಸಹ ಬೇರೆ ಬೇರೆ ಸಂದರ್ಭಗಳಲ್ಲಿ ಈ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗಿದೆ.
ಉದಾಹರಣೆಗೆ, 'ಆಪರೇಷನ್ ಸಫೇದ್ ಸಾಗರ್'ನಲ್ಲಿ ಬಿಂಬಿತವಾಗಿರುವ 17ನೇ ಸ್ಕ್ವಾಡ್ರನ್, ಕಾರ್ಗಿಲ್ ಯುದ್ಧದ ಆರಂಭಿಕ ಹಂತದಲ್ಲಿ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ನಂತರದ ದಿನಗಳಲ್ಲಿ ಇದಕ್ಕೆ ಬಾಂಬ್ ದಾಳಿ ಮಾಡುವ ಜವಾಬ್ದಾರಿಯನ್ನೂ ನೀಡಲಾಯಿತು. ಅದೇ ರೀತಿ, ಕಾರ್ಗಿಲ್ ಯುದ್ಧದ ನಂತರ ನಡೆದ 'ಆಪರೇಷನ್ ಪರಾಕ್ರಮ' ಸಮಯದಲ್ಲಿ 14 ಸ್ಕ್ವಾಡ್ರನ್ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಪ್ರಸ್ತುತ, ಎಲ್ಲಾ ಮಿಗ್-21 ಸ್ಕ್ವಾಡ್ರನ್ಗಳನ್ನು ಸೇವೆಯಿಂದ ಹಿಂಪಡೆಯಲಾಗಿರುವುದರಿಂದ, ಜಾಗ್ವಾರ್ ಮತ್ತು ಸುಖೋಯ್-30 ವಿಮಾನಗಳು ಮಾತ್ರ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿವೆ. ಆದರೆ ಇದು ಅವುಗಳ ಹಲವು ಜವಾಬ್ದಾರಿಗಳಲ್ಲಿ ಒಂದಷ್ಟೇ ಆಗಿದೆ.
►ವರ್ಷಗಳ ಅವಧಿಯಲ್ಲಿ ಫೋಟೋ-ರಿಕಾನಸನ್ಸ್ ಹೇಗೆ ಬದಲಾಗಿದೆ?
ಈ ಹಿಂದೆ, ಇಂತಹ ಕಾರ್ಯಾಚರಣೆಗಳಿಗೆ ಫಿಲ್ಮ್ ಆಧಾರಿತ ಹಳೆಯ ಕ್ಯಾಮೆರಾಗಳನ್ನು ಬಳಸಲಾಗುತ್ತಿತ್ತು. ನಂತರ ಈ ಫಿಲ್ಮ್ಗಳನ್ನು ಬಳಸಿ ಸ್ಪಷ್ಟವಾದ ಚಿತ್ರಗಳನ್ನು ಅಭಿವೃದ್ಧಿಪಡಿಸಿ, ಮುಂದಿನ ಕಾರ್ಯಾಚರಣೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಶ್ಲೇಷಿಸಲಾಗುತ್ತಿತ್ತು.
ಕಾರ್ಗಿಲ್ ಯುದ್ಧದ ಸಮಯದಲ್ಲಿ, ಮಿಗ್-21 ವಿಮಾನಗಳಲ್ಲಿ 'ವಿಂಟನ್ 751' (Vinten 751) ಕ್ಯಾಮೆರಾವನ್ನು ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದರ ಫೋಕಲ್ ಲೆಂತ್ ಕೇವಲ ಮೂರು ಇಂಚು ಇದ್ದಿದ್ದರಿಂದ, ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಾಗಲೂ ವಿಶಾಲವಾದ ಪ್ರದೇಶದ ಚಿತ್ರಗಳನ್ನು ಸೆರೆಹಿಡಿಯಲು ವಿಮಾನಕ್ಕೆ ಸಾಧ್ಯವಾಗುತ್ತಿತ್ತು ಎಂದು ಆ ಸಮಯದಲ್ಲಿ No. 17 ‘Golden Arrows’ ಸ್ಕ್ವಾಡ್ರನ್ನ ಕಮಾಂಡಿಂಗ್ ಆಫೀಸರ್ ಆಗಿದ್ದ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ (ನಿವೃತ್ತ) ಹೇಳಿರುವುದಾಗಿ ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ವರದಿ ಉಲ್ಲೇಖಿಸಿದೆ.
"ಅದು ರಷ್ಯಾದ ಇಂಧನ ಟ್ಯಾಂಕ್ ಒಳಗೆ ಅಳವಡಿಸಲಾಗಿದ್ದ ಬ್ರಿಟಿಷ್ ನಿರ್ಮಿತ ಕ್ಯಾಮೆರಾವಾಗಿತ್ತು" ಎಂದು ಅವರು ನೆನಪಿಸಿಕೊಂಡಿದ್ದಾರೆ. ಧನೋವಾ ಅವರ ಸ್ಕ್ವಾಡ್ರನ್ ಸ್ಥಳೀಯ ಮಟ್ಟದ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳನ್ನು ನಡೆಸಿದರೆ, ಭಾರತೀಯ ವಾಯುಪಡೆಯ ಇತರ ಸ್ಕ್ವಾಡ್ರನ್ಗಳು ವ್ಯೂಹಾತ್ಮಕ ಗೂಢಚರ್ಯೆ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದವು.
ಆಪರೇಷನ್ ಪರಾಕ್ರಮ ಸಮಯದಲ್ಲಿ 14 ಸ್ಕ್ವಾಡ್ರನ್ನ ಕಮಾಂಡಿಂಗ್ ಆಫೀಸರ್ ಆಗಿದ್ದ ಏರ್ ವೈಸ್ ಮಾರ್ಷಲ್ ಸುನಿಲ್ ನಾನೋದ್ಕರ್ (ನಿವೃತ್ತ) ಮಾತನಾಡಿ, ಜಾಗ್ವಾರ್ ವಿಮಾನಗಳು ಗೂಢಚರ್ಯೆಗಾಗಿ ಅನೇಕ ಹಾರಾಟಗಳನ್ನು ನಡೆಸುತ್ತಿದ್ದವು ಎಂದು ವಿವರಿಸಿದ್ದಾರೆ. ಅಂಬಾಲಾ ಮೂಲದ 14 ಸ್ಕ್ವಾಡ್ರನ್ ಜಾಗ್ವಾರ್ ವಿಮಾನಗಳನ್ನು ಹೊಂದಿದೆ.
"ನಾವು ನಮ್ಮ ಗಡಿಯ ಒಳಗೇ ಇದ್ದುಕೊಂಡು, 'ಲಾಂಗ್-ರೇಂಜ್ ಆಬ್ಲಿಕ್ ಫೋಟೋಗ್ರಫಿ' (LOROP) ತಂತ್ರಜ್ಞಾನವನ್ನು ಬಳಸಿ ಶತ್ರುಗಳ ಗಡಿಯೊಳಗೆ 75 ಕಿ.ಮೀ ವರೆಗಿನ ಚಿತ್ರಗಳನ್ನು ಪಡೆಯುತ್ತಿದ್ದೆವು. ಈ ಕ್ಯಾಮೆರಾ ಶತ್ರುಗಳ ಆಳವಾದ ಪ್ರದೇಶದಲ್ಲಿನ ಪ್ರಮುಖ ಸೇನಾ ಚಟುವಟಿಕೆಗಳನ್ನು ಸೆರೆಹಿಡಿಯುತ್ತಿತ್ತು" ಎಂದು ಅವರು ಹೇಳಿದ್ದಾರೆ.
ಆ ಸಮಯದಲ್ಲಿ ಚಿತ್ರಗಳನ್ನು ಸೆರೆಹಿಡಿಯಲು LOROP, ವಿಕಾನ್ ಪಾಡ್ಸ್ (Vicon pods) ಮತ್ತು ಬ್ರಿಟಿಷ್ ಏರೋಸ್ಪೇಸ್ ಪಾಡ್ಸ್ ಸೇರಿದಂತೆ ವಿವಿಧ ಮಾದರಿಯ ಕ್ಯಾಮೆರಾಗಳು ಹಾಗೂ ಉಪಕರಣಗಳನ್ನು ಬಳಸಲಾಗುತ್ತಿತ್ತು ಎಂದಿದ್ದಾರೆ ನಾನೋದ್ಕರ್.
►ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳು
ಅಂದಿನಿಂದ ಇಂದಿನವರೆಗೆ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ.
ಪ್ರಸ್ತುತ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳಿಗಾಗಿ 'ರಿಕಾನಸನ್ಸ್ ಲೈಟ್ ಪಾಡ್ಸ್' ಮತ್ತು 'ಲೈಟನಿಂಗ್ ಟಾರ್ಗೆಟಿಂಗ್ ಪಾಡ್ಸ್' ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದು ಸುನಿಲ್ ನಾನೋದ್ಕರ್ ವಿವರಿಸಿದ್ದಾರೆ. "ಈಗ ಚಿತ್ರಗಳು ಫಿಲ್ಮ್ಗಳಲ್ಲಿ ಸೆರೆಸಿಗುವುದಿಲ್ಲ. ಬದಲಾಗಿ ಗ್ರೌಂಡ್ ಸ್ಟೇಷನ್ಗಳ ಮೂಲಕ ನೇರವಾಗಿ ಕಮಾಂಡರ್ಗಳಿಗೆ ಕ್ಷಣಾರ್ಧದಲ್ಲಿ ತಲುಪುತ್ತವೆ. ತಕ್ಷಣವೇ ಅವುಗಳನ್ನು ವಿಶ್ಲೇಷಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ಉಪಗ್ರಹಗಳು ಮತ್ತು ಡ್ರೋನ್ಗಳ ಬಳಕೆ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ, ಯುದ್ಧ ವಿಮಾನಗಳ ಮೂಲಕ ನಡೆಸುವ ಫೋಟೋ-ರಿಕಾನಸನ್ಸ್ ಕಾರ್ಯಾಚರಣೆಗಳ ಅಗತ್ಯ ಇನ್ನೂ ಇದೆಯೇ? ಖಂಡಿತವಾಗಿಯೂ ಇದೆ, ಮುಖ್ಯವಾಗಿ ಯುದ್ಧದ ಸಮಯದಲ್ಲಿ ಇವುಗಳ ಪಾತ್ರ ದೊಡ್ಡದಾಗಿದೆ.
"ಉಪಗ್ರಹಗಳು, ಡ್ರೋನ್ಗಳು ಮತ್ತು ಯುದ್ಧ ವಿಮಾನಗಳು ಮೂರೂ ನೆಲದ ಮೇಲಿನ ಚಿತ್ರಗಳನ್ನು ತಕ್ಷಣವೇ ಒದಗಿಸಬಲ್ಲವು. ಆದರೆ ಉಪಗ್ರಹಗಳು ಒಂದು ನಿರ್ದಿಷ್ಟ ಪ್ರದೇಶದ ಮೇಲೆ ಮರಳಿ ಬರಲು ಸಮಯ ತೆಗೆದುಕೊಳ್ಳುತ್ತವೆ . ಇನ್ನು ಯುದ್ಧದ ಸಮಯದಲ್ಲಿ ಡ್ರೋನ್ಗಳ ಮೇಲೆ ಶತ್ರುಗಳು ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ, ಯುದ್ಧ ವಿಮಾನಗಳು ಯಾವುದೇ ಸಮಯದಲ್ಲಿ ಅತ್ಯಂತ ವೇಗವಾಗಿ ತೆರಳಿ ಫೋಟೊಗಳನ್ನು ಸೆರೆಹಿಡಿಯಬಲ್ಲವು" ಎಂದು ನಾನೋದ್ಕರ್ ಹೇಳಿದ್ದಾರೆ.
ಕೃಪೆ: indianexpress.com






