ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಈಗಲೂ ಪ್ರಗತಿಯಲ್ಲಿದೆ: ಭಾರತೀಯ ವಾಯುಪಡೆ

Photo credit: PTI
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಮರುದಿನವೇ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ನಡೆಯುತ್ತಿರುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಾದ ‘ಆಪರೇಷನ್ ಸಿಂಧೂರ್’ ಇನ್ನೂ ಪ್ರಗತಿಯಲ್ಲಿದೆ ಎಂದು ರವಿವಾರ ಭಾರತೀಯ ವಾಯುಪಡೆ ಹೇಳಿದೆ.
ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಾಯುಪಡೆ, “ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಈ ಕುರಿತು ಮುಂದಿನ ದಿನಗಳಲ್ಲಿ ವಿಸ್ತೃತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು” ಎಂದು ಹೇಳಿದೆ.
“ಭಾರತೀಯ ವಾಯುಪಡೆಯು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ತನಗೆ ವಹಿಸಲಾಗಿದ್ದ ಕೆಲಸವನ್ನು ನಿಖರತೆ ಹಾಗೂ ವೃತ್ತಿಪರತೆಯೊಂದಿಗೆ ನಿರ್ವಹಿಸಿದೆ. ಕಾರ್ಯಾಚರಣೆಯನ್ನು ಉದ್ದೇಶಪೂರ್ವಕ ಹಾಗೂ ಮತ್ತು ವಿವೇಚನಾಯುಕ್ತ ರೀತಿಯಲ್ಲಿ ನಡೆಸಲಾಗಿದೆ” ಎಂದೂ ಅದು ತನ್ನ ಪೋಸ್ಟ್ ನಲ್ಲಿ ಹೇಳಿದೆ.
ಎರಡು ಅಣ್ವಸ್ತ್ರ ಸಜ್ಜಿತ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ ಮರುದಿನವೇ ಭಾರತೀಯ ವಾಯುಪಡೆಯಿಂದ ಈ ಹೇಳಿಕೆ ಹೊರ ಬಿದ್ದಿದೆ.







