ತೆರೆದ ಬಾಗಿಲು, ಬಾರದ ಲಿಫ್ಟ್ : ನಾಲ್ಕನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದು ವ್ಯಕ್ತಿಯ ಸಾವು
ಜಾರ್ಖಂಡ್ನಲ್ಲಿ ನಡೆದ ದುರಂತ

ಸಾಂದರ್ಭಿಕ ಚಿತ್ರ (Photo :taxreply.com)
ರಾಂಚಿ: ಬಾಗಿಲು ತೆರೆದಾಗ ಲಿಫ್ಟ್ ಬಂದಿದೆ ಎಂದು ಭಾವಿಸಿ ಒಳಗಡಿಯಿಟ್ಟ ವ್ಯಕ್ತಿಯೋರ್ವ ನಾಲ್ಕನೇ ಅಂತಸ್ತಿನಿಂದ ಲಿಫ್ಟ್ನ ಗುಂಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಲ್ಲಿ ಸಂಭವಿಸಿದೆ.
ಶೈಲೇಶ್ ಕುಮಾರ್ ಮೃತ ವ್ಯಕ್ತಿ. ಶುಕ್ರವಾರ ನಾಲ್ಕನೇ ಅಂತಸ್ತಿನಿಂದ ನೆಲಅಂತಸ್ತಿಗೆ ಹೋಗಲು ಲಿಫ್ಟ್ ಬಟನ್ ಒತ್ತಿದ್ದರು. ಬಾಗಿಲು ತಕ್ಷಣ ತೆರೆದುಕೊಂಡಿತ್ತು. ಆದರೆ ಲಿಫ್ಟ್ನ ಪ್ಲ್ಯಾಟ್ಫಾರ್ಮ್ ಇನ್ನೂ ಬಂದಿರಲಿಲ್ಲ.
ಇದನ್ನು ಗಮನಿಸದೆ ಒಳ ಪ್ರವೇಶಿಸಿದ ಶೈಲೇಶ್ ಕುಮಾರ್ ನೇರವಾಗಿ ತಳ ಅಂತಸ್ತಿನಲ್ಲಿಯ ಲಿಫ್ಟ್ನ ಗುಂಡಿಗೆ ಬಿದ್ದಿದ್ದರು. ಭಾರೀ ಶಬ್ದವನ್ನು ಕೇಳಿ ಜನರು ಧಾವಿಸಿ ಬಂದರಾದರೂ ಆ ವೇಳೆಗಾಗಲೇ ಶೈಲೇಶ್ ಕೊನೆಯುಸಿರೆಳೆದಿದ್ದರು ಎಂದು ಪೋಲಿಸರು ತಿಳಿಸಿದರು.
ಲಿಫ್ಟ್ಗೆ ಬೀಗಮುದ್ರೆಯನ್ನು ಹಾಕಲಾಗಿದ್ದು, ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
Next Story





