ಆಪರೇಷನ್ ಸಿಂಧೂರ: ಸೇನೆಗೆ ತುರ್ತು ಖರೀದಿ ಅಧಿಕಾರ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ತನ್ನ ಕಾರ್ಯಶೈಲಿಯನ್ನು ಕೊನೆಗೊಳಿಸದಿದ್ದರೆ, ಶತ್ರುರಾಷ್ಟ್ರದ ಜತೆಗೆ ಮಾಡಿಕೊಂಡಿರುವ ಆಪರೇಷನ್ ಸಿಂಧೂರ ಯುದ್ಧವಿರಾಮ ಕೇವಲ 'ಕಾರ್ಯತಂತ್ರದ ವಿರಾಮ' ಎಂದು ಭಾರತ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಟ್ಟಾರೆ 40 ಸಾವಿರ ಕೋಟಿ ರೂಪಾಯಿ ಮಿತಿಯಲ್ಲಿ ತುರ್ತು ಖರೀದಿಗೆ ಸಶಸ್ತ್ರ ಪಡೆಗಳಿಗೆ ಅಧಿಕಾರ ನೀಡಿದೆ.
ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳಿಗೆ ಇಪಿ-6 ಅಧಿಕಾರ ನೀಡಲಾಗಿದ್ದು, ಇದರಿಂದಾಗಿ ಮೂರೂ ಪಡೆಗಳು ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹದಲ್ಲಿ ಇಟ್ಟುಕೊಳ್ಳಲು ಅನುಕೂಲವಾಗಲಿದೆ. ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ಕೆಲ ದಿನಗಳ ಹಿಂದೆ ಈ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ನೀಡಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲ ನಾಲ್ಕು ಇಪಿಗಳನ್ನು ಪೂರ್ವ ಲಡಾಖ್ ನಲ್ಲಿ ಚೀನಾ ಜತೆಗಿನ ಸೇನಾ ಸಂಘರ್ಷದ ವೇಳೆ ಮಂಜೂರು ಮಾಡಲಾಗಿದ್ದು, ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗೆ ಐದನೇ ಇಪಿ ಮಂಜೂರು ಮಾಡಲಾಗಿತ್ತು. ಇದೀಗ ಇಪಿ-7 ಅಡಿಯಲ್ಲಿ ಸಶಸ್ತ್ರ ಪಡೆಗಳು ತಲಾ 300 ಕೋಟಿ ರೂಪಾಯಿ ಮೌಲ್ಯದ ತ್ವರಿತ ಗತಿಯ ಬಹು ಗುತ್ತಿಗೆಗಳನ್ನು ಹೂಡಿಕೆ ಮತ್ತು ಆದಾಯ ಶೀರ್ಷಿಕೆಯಡಿ ಮಾಡಿಕೊಳ್ಳಲು ಅವಕಾಶವಿದೆ. ಇದಕ್ಕೆ ಸುಧೀರ್ಘ ಕಾಲ ವಿಸ್ತರಿಸುವ ಖರೀದಿ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯವಿಲ್ಲ.
ಈ ಗುತ್ತಿಗೆಗಳನ್ನು 40 ದಿನಗಳಲ್ಲಿ ಪೂರ್ಣಗೊಳಿಸಬೇಕಿದ್ದು, ಒಂದು ವರ್ಷದ ಒಳಗಾಗಿ ವಿತರಣೆ ಪೂರೈಸಬೇಕು. ಮೂರೂ ಪಡೆಗಳ ಉಪ ಮುಖ್ಯಸ್ಥರು ಈ ಅಧಿಕಾರಗಳನ್ನು ಚಲಾಯಿಸಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದು ಸಶಸ್ತ್ರ ಪಡೆಗಳಿಗೆ ತ್ವರಿತವಾಗಿ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು ಮತ್ತು ಧೀರ್ಘ ಸಾಮರ್ಥ್ಯದ ಶಸ್ತ್ರಾಸ್ತ್ರಗಳು, ಲೋಯಿಟರ್ ಮತ್ತು ನಿಖರ-ನಿರ್ದೇಶಿತ ಶಸ್ತ್ರಾಸ್ತ್ರಗಳು, ಕಮಿಕಾಝ್ ಡ್ರೋನ್ ಗಳು ಮತ್ತು ಡ್ರೋನ್ ಪ್ರತಿರೋಧ ವ್ಯವಸ್ಥೆ ಮತ್ತಿತರ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅನುವು ಮಾಡಿಕೊಡಲಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಒಟ್ಟು ಮೊತ್ತದಲ್ಲಿ ಶೇಕಡ 15ರಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಈ ಅಧಿಕಾರದಡಿ ಖರೀದಿಸಬಹುದಾಗಿದೆ.