‘ಆಪರೇಷನ್ ಸಿಂಧೂರ’ದ ವೀಡಿಯೊ ಹಂಚಿಕೊಂಡ ಸೇನೆ

PC : NDTV
ಹೊಸದಿಲ್ಲಿ: ಭಾರತೀಯ ಸೇನೆಯು ಸೋಮವಾರ ಉನ್ನತ ರಕ್ಷಣಾ ಅಧಿಕಾರಿಗಳ ವಿಶೇಷ ಸುದ್ದಿಗೋಷ್ಠಿಯಲ್ಲಿ ‘ಆಪರೇಷನ್ ಸಿಂಧೂರ’ದ ಸಂಕಲಿತ ವಿಡಿಯೊವನ್ನು ಹಂಚಿಕೊಂಡಿದೆ. ‘ಶತ್ರುವನ್ನು ಆಗಸದಲ್ಲೇ ನಾಶ ಮಾಡಿ’ ಶೀರ್ಷಿಕೆಯ ಈ ವೀಡಿಯೊ ಸೇನೆ,ವಾಯುಪಡೆ ಮತ್ತು ನೌಕಾಪಡೆಗಳ ಹಲವಾರು ಕಾರ್ಯಾಚರಣೆಗಳ ದೃಶ್ಯಾವಳಿಗಳನ್ನು ಒಳಗೊಂಡಿದೆ. ವೀಡಿಯೊದ ಒಂದು ಭಾಗವು ಮಿಲಿಟರಿ ಉಪಕರಣಗಳ ಭಗ್ನಾವಶೇಷಗಳಂತೆ ಕಾಣುವ ಸ್ಥಿರ ಕೊಲಾಜ್ ನ್ನು ಪ್ರದರ್ಶಿಸಿದ್ದು,‘ಪಾಕಿಸ್ತಾನಿ ಮಿರಾಜ್ ಛಿದ್ರಗೊಂಡಿದೆ’ ಎಂಬ ಅಡಿಬರಹ ಹೊಂದಿದೆ.
ಇದು ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮಿರಾಜ್ ಯುದ್ಧವಿಮಾನವನ್ನು ಧ್ವಂಸಗೊಳಿಸಿವೆ ಎಂಬ ವರದಿಗಳಿಗೆ ಕಾರಣವಾಗಿದೆ. ಆದರೆ ಭಾರತೀಯ ವಾಯುಪಡೆಯು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ಇಲ್ಲಿ ನಡೆದ ಉನ್ನತ ಮಟ್ಟದ ಸುದ್ದಿಗೋಷ್ಠಿಯಲ್ಲಿ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆ.ಜ.ರಾಜೀವ ಘಾಯ್,ವಾಯು ಕಾರ್ಯಾಚರಣೆಗಳ ಮಹಾ ನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಮತ್ತು ನೌಕಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ ಅವರು ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಮೇ 7ರಂದು ಆರಂಭಿಸಲಾದ ‘ಆಪರೇಷನ್ ಸಿಂಧೂರ’ ಕುರಿತು ಸಮಗ್ರ ವಿವರಗಳನ್ನು ಒದಗಿಸಿದರು. ಭಾರತೀಯ ಗುಪ್ತಚರ ಸೇವೆಗಳ ಪ್ರಕಾರ ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರೆ ತಯ್ಯಿಬಾ ಮತ್ತು ಪಾಕಿಸ್ತಾನ ಸೇನೆಯ ಅಧಿಕಾರಿಗಳ ಕೈವಾಡವಿತ್ತು.
‘ನಮ್ಮ ರಕ್ಷಣಾ ವ್ಯವಸ್ಥೆಗಳು ಕಾಲದ ಪರೀಕ್ಷೆಯಲ್ಲಿ ಗೆದ್ದಿವೆ ಮತ್ತು ಅವರನ್ನು ನೇರವಾಗಿ ಎದುರಿಸಿವೆ. ಮತ್ತೊಂದು ಪ್ರಮುಖ ಅಂಶವೆಂದರೆ ಸ್ವದೇಶಿ ನಿರ್ಮಿತ ‘ಆಕಾಶ’ ವಾಯು ರಕ್ಷಣಾ ವ್ಯವಸ್ಥೆಯ ಅದ್ಭುತ ಸಾಧನೆ. ಕಳೆದೊಂದು ದಶಕದಲ್ಲಿ ಭಾರತ ಸರಕಾರದಿಂದ ಬಜೆಟ್ ಮತ್ತು ನೀತಿ ಬೆಂಬಲದಿಂದಾಗಿ ಪ್ರಬಲ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಲು ಸಾಧ್ಯವಾಗಿದೆ’ ಎಂದು ಏರ್ ಮಾರ್ಷಲ್ ಭಾರ್ತಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಆಪರೇಷನ್ ಸಿಂಧೂರ’ ಮೇ 7ರ ನಸುಕಿನಲ್ಲಿ ಸುಮಾರು 25 ನಿಮಿಷಗಳ ಕಾಲ ನಡೆದಿತ್ತು. ಪಾಕಿಸ್ತಾನದ ಮುಖ್ಯ ಭೂಭಾಗದಲ್ಲಿಯ ಐದು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ನಾಲ್ಕು ಸೇರಿದಂತೆ ಒಂಬತ್ತು ದೃಢೀಕೃತ ಭಯೋತ್ಪಾದಕ ತಾಣಗಳ ಮೇಲೆ ದಾಳಿಗಳನ್ನು ನಡೆಸಲಾಗಿತ್ತು. ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರಕಾರ ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಅಧಿಕ ಭಯೋತ್ಪಾದಕರು ಬಲಿಯಾಗಿದ್ದು, ಲಷ್ಕರೆ ತಯ್ಯಿಬಾ, ಜೈಷೆ ಮುಹಮ್ಮದ್ ಮತ್ತು ಹಿಝ್ಬುಲ್ ಮುಜಾಹಿದೀನ್ಗೆ ಸಂಬಂಧಿಸಿದ ಹಲವಾರು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.
ಭಾರತದ ದಾಳಿಗಳ ಬಳಿಕ ಪಾಕಿಸ್ತಾನವು ಜಮ್ಮುಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನಗಳಾದ್ಯಂತ ಭಾರತೀಯ ಮಿಲಿಟರಿ ನೆಲೆಗಳು ಮತ್ತು ಗಡಿ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಆರಂಭಿಸಿತ್ತು. ಈ ದಾಳಿಗಳು ಚಂಡಿಗಡ,ಜೈಸಲ್ಮೇರ್ ಮತ್ತು ಪಠಾಣಕೋಟ್ ಸೇರಿದಂತೆ ಹಲವು ನಗರಗಳಲ್ಲಿ ವಾಯು ದಾಳಿ ಸೈರನ್ ಗಳು ಮೊಳಗಲು ಮತ್ತು ಬ್ಲ್ಯಾಕ್ ಔಟ್ಗಳಿಗೆ ಕಾರಣವಾಗಿದ್ದವು.
ಭಾರತವು ಉಧಮಪುರ, ಆದಮ್ಪುರ, ಪಠಾಣ್ ಕೋಟ್ ಮತ್ತು ಭುಜ್ನಲ್ಲಿ ಸೀಮಿತ ಹಾನಿಗಳು ಉಂಟಾಗಿವೆ ಎಂದು ಹೇಳಿದೆ. ಫಿರೋಝ್ಪುರದಲ್ಲಿ ನಾಗರಿಕರು ಗಾಯಗೊಂಡಿದ್ದರೆ ಜಮ್ಮುಕಾಶ್ಮೀರದ ರಾಜೌರಿಯಲ್ಲಿ ಹಿರಿಯ ಸರಕಾರಿ ಅಧಿಕಾರಿಯೋರ್ವರು ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು.
ಸ್ವದೇಶಿ ನಿರ್ಮಿತ ಸಾಫ್ಟ್ ಮತ್ತು ಹಾರ್ಡ್ ಕಿಲ್ ಕೌಂಟರ್-ಯುಎಎಸ್ ವ್ಯವಸ್ಥೆಗಳು ಮತ್ತು ಅನುಭವಿ ವಾಯು ರಕ್ಷಣಾ ಸಿಬ್ಬಂದಿಗಳು ಪಾಕಿಸ್ತಾನವು ನಿಯೋಜಿಸಿದ್ದ ಡ್ರೋನ್ಗಳು ಮತ್ತು ಮಾನವರಹಿತ ವೈಮಾನಿಕ ಯುದ್ಧ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಏರ್ ಮಾರ್ಷಲ್ ಭಾರ್ತಿ ತಿಳಿಸಿದರು.







