ಸ್ಪೀಕರ್ ಹುದ್ದೆಗೆ ವಿಪಕ್ಷಗಳಿಂದ ಕೋಡಿಕುನ್ನಿಲ್ ಸುರೇಶ್ ನಾಮಪತ್ರ ಸಲ್ಲಿಕೆ
ಮೊದಲ ಬಾರಿಗೆ ಸ್ಪೀಕರ್ ಸ್ಥಾನಕ್ಕೆ ನಡೆಯಲಿದೆ ಚುನಾವಣೆ

Photo : newindianexpress.com
ಹೊಸದಿಲ್ಲಿ : ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಮಂಗಳವಾರ ಕೇರಳದಿಂದ ಎಂಟು ಬಾರಿ ಸಂಸದರಾಗಿರುವ ಕೋಡಿಕುನ್ನಿಲ್ ಸುರೇಶ್ ಅವರನ್ನು ಲೋಕಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆ ಮಾಡಿದೆ. ಸುರೇಶ್ ನಾಮಪತ್ರಸಲ್ಲಿಸಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.
ಆಡಳಿತ ರೂಢ ಎನ್ ಡಿ ಎ ಯ ಪ್ರಮುಖ ಪಕ್ಷ ಬಿಜೆಪಿಯ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಿಪಕ್ಷಗಳ ಮುಖಂಡರನ್ನು ಭೇಟಿಯಾಗಿ, ಹಿಂದಿನ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನೇ ಸ್ವೀಕರ್ ಆಗಿ ಮುಂದುವರೆಸಲು ಸಹಕಾರ ಬಯಸಿದ್ದರು. ಅದಕ್ಕೆ ಪ್ರತಿಯಾಗಿ ವಿಪಕ್ಷಗಳು ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಬೇಡಿಕೆ ನೀಡಿದ್ದವು.
ಲೋಕಸಭಾ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸುವ ಕೊನೆಯ ಕ್ಷಣದ ವರೆಗೂ ಬಿಜೆಪಿಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಕೋಡಿಕುನ್ನಿಲ್ ಸುರೇಶ್ ಅವರ ಹೆಸರನ್ನು ಆಯ್ಕೆ ಮಾಡಿತು. ಮೂಲಗಳ ಪ್ರಕಾರ ಬಿಜೆಪಿಯು ಲೋಕಸಭಾ ಸ್ಪೀಕರ್ ಆಯ್ಕೆಯಾದ ಬಳಿಕ, ಡೆಪ್ಯೂಟಿ ಸ್ಪೀಕರ್ ಹುದ್ದೆಯ ಆಯ್ಕೆ ಕುರಿತು ನಿರ್ಧಾರ ತಾಳುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ.





