SIR | ಗೋವಾದಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟ ವರದಿಯ ಬೆನ್ನಲ್ಲೇ ಚುನಾವಣಾ ಆಯೋಗದ ವಿರುದ್ಧ ಪ್ರತಿಪಕ್ಷ ವಾಗ್ದಾಳಿ

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ (Photo: PTI)
ಹೊಸದಿಲ್ಲಿ: ಗೋವಾದಲ್ಲಿ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬಳಿಕ,ತಳಮಟ್ಟದ ಅಧಿಕಾರಿಗಳು ಅರ್ಹರೆಂದು ಗುರುತಿಸಿದ್ದ 97 ಮತದಾರರನ್ನು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿಯ ಬೆನ್ನಲ್ಲೇ, ಗುರುವಾರ ಪ್ರತಿಪಕ್ಷವು ಚುನಾವಣಾ ಆಯೋಗದ ವಿರುದ್ಧ ಹೊಸ ಸುತ್ತಿನ ವಾಗ್ದಾಳಿಯನ್ನು ಆರಂಭಿಸಿದೆ.
ವರದಿಯ ಕುರಿತು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರಧಾನಿಯವರ ಸೂಚನೆಯ ಮೇರೆಗೆ ಇಡೀ ವ್ಯವಸ್ಥೆಯನ್ನು ಹೈಜಾಕ್ ಮಾಡಿದ್ದಾರೆ ಮತ್ತು ದೇಶವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಚುನಾವಣಾ ಪ್ರಕ್ರಿಯೆಯೊಂದಿಗೆ ಸಂಪೂರ್ಣವಾಗಿ ರಾಜಿ ಮಾಡಿಕೊಳ್ಳಲಾಗಿದೆ ಮತ್ತು ಕಲುಷಿತಗೊಳಿಸಲಾಗಿದೆ ಎನ್ನುವುದನ್ನು ಇದು ಸಾಬೀತುಗೊಳಿಸಿದೆ ಎಂದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಕುಮಾರ್ ರಾಜೀನಾಮೆಗಾಗಿ ಪಕ್ಷದ ಆಗ್ರಹವನ್ನು ಪುನರುಚ್ಚರಿಸಿದ್ದಾರೆ.
ದಿಲ್ಲಿಯಲ್ಲಿ ಐಟಿ ವಿಭಾಗದ ನಿಯಂತ್ರಣದಲ್ಲಿರುವ ಚುನಾವಣಾ ಆಯೋಗದ ‘ಇಸಿಐನೆಟ್’ ವ್ಯವಸ್ಥೆಯು ಸ್ಥಳೀಯ ಚುನಾವಣಾಧಿಕಾರಿಗಳಿಗೆ (ಇಆರ್ಒ) ಮೊದಲಿನ ಅಳಿಸುವಿಕೆ ನಿರ್ಧಾರಗಳನ್ನು ಹಿಂಪಡೆದುಕೊಳ್ಳಲು ಅವಕಾಶ ನೀಡಲಿಲ್ಲ. ಹೀಗಾಗಿ ಇಆರ್ಒ 2026ರ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅರ್ಹರೆಂದು ಗುರುತಿಸಿದ್ದ ಗೋವಾದ 97 ಮತದಾರರನ್ನು ಕೈಬಿಡಲಾಗಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿಯು ಆರೋಪಿಸಿದೆ.
ಗೋವಾ ಮುಖ್ಯ ಚುನಾವಣಾಧಿಕಾರಿ (ಸಿಇಒ) ಸಂಜಯ್ ಗೋಯೆಲ್ ಅವರು ರೋಲ್ಬ್ಯಾಕ್ ಸೌಲಭ್ಯವನ್ನು ಕೋರಿ ಏಳು ದಿನಗಳಲ್ಲಿ ಎಂಟು ಇಮೇಲ್ಗಳನ್ನು ಕಳುಹಿಸಿದ್ದರೂ ಮತ್ತು ಆಯೋಗದ ಉಪ ಚುನಾವಣಾ ಆಯುಕ್ತರು ಐಟಿ ವಿಭಾಗಕ್ಕೆ ನಿರ್ದೇಶನ ನೀಡಿದ್ದರೂ ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮೊದಲು ಆ ಸೌಲಭ್ಯವನ್ನು ಒದಗಿಸಲಾಗಿಲ್ಲ.
ಆದಾಗ್ಯೂ, ಈ ವಿಷಯದ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗಳಿಗೆ ಉತ್ತರಿಸಲು ಗೋಯೆಲ್ ನಿರಾಕರಿಸಿದ್ದು, ತನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಎಕ್ಸ್ ಪೋಸ್ಟ್ನಲ್ಲಿ ಪ್ರಧಾನಿ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್,ನರೇಂದ್ರ ಮೋದಿಯವರ ಡಾರ್ಲಿಂಗ್ ಕುಮಾರ್ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುತ್ತಿದ್ದಾರೆ. ಮತದಾರರ ಹಕ್ಕಿನ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವ ಅವರೇ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದೆ.
ಜನ ಪ್ರತಿನಿಧಿ ಕಾಯ್ದೆಯಡಿ ಇಆರ್ಒಗಳಿಗೆ ಮತದಾರರ ಪಟ್ಟಿಗಳ ಕುರಿತು ಮೇಲೆ ಶಾಸನಬದ್ಧ ಅಧಿಕಾರವಿದೆ ಎಂದು ಬೆಟ್ಟು ಮಾಡಿರುವ ರಮೇಶ, ಗೋವಾದಲ್ಲಿ ಇಆರ್ಒಗಳ ಇಸಿಐನೆಟ್ ಸಾಫ್ಟ್ವೇರ್ ಪ್ರವೇಶವನ್ನು ಅಕ್ರಮವಾಗಿ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ತಳಮಟ್ಟದಲ್ಲಿ ಶಾಸನಬದ್ಧ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರಗಳ ಮೇಲೆ ಸವಾರಿ ಮಾಡುವ ಈ ಕೇಂದ್ರೀಕೃತ ಸಾಫ್ಟ್ವೇರ್ ನಿಯಂತ್ರಣವನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಲೇ ಬಂದಿವೆ.
ಇದು ಅತ್ಯಂತ ಗಂಭೀರ ವರದಿ ಎಂದು ಬಣ್ಣಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ಇದು ಭಾರತೀಯ ನಾಗರಿಕರನ್ನು ಸಾಂವಿಧಾನಿಕ ಹಕ್ಕುಗಳಿಂದ ವಂಚಿತರನ್ನಾಗಿ ಮಾಡುವುದನ್ನು ಒಳಗೊಂಡಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗವು
ರಾಷ್ಟ್ರದ ಕ್ಷಮೆಯಾಚಿಸಬೇಕು ಹಾಗೂ ಈ ವಿನಾಶಕಾರಿ ಸಾಫ್ಟ್ವೇರ್ ಅನ್ನು ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.






