ಟ್ರಂಪ್ ಭೇಟಿ, ಓಪನ್ ಎಐ ಜೊತೆ ಪ್ರಮುಖ ಒಪ್ಪಂದದ ಬೆನ್ನಲ್ಲೇ ಭಾರತದ 10% ಉದ್ಯೋಗಿಗಳನ್ನು ವಜಾಗೊಳಿಸಿದ “ಒರಾಕಲ್” ಕಂಪೆನಿ!

Photo | indiatoday
ಹೊಸದಿಲ್ಲಿ : ವಿಶ್ವದ ಅತಿದೊಡ್ಡ ಸಾಫ್ಟ್ವೇರ್ ಕಂಪೆನಿಗಳಲ್ಲಿ ಒಂದಾದ “ಒರಾಕಲ್”(Oracle) ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇದರಿಂದ ಸ್ಥಳೀಯ ಉದ್ಯೋಗಿಗಳಲ್ಲಿ ಅಂದರೆ ಭಾರತದ ಒಟ್ಟು ನೌಕರರಲ್ಲಿ ಸುಮಾರು 10% ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಒರಾಕಲ್ ಕಂಪೆನಿಯು ಇತ್ತೀಚೆಗೆ ಓಪನ್ ಎಐ ಜೊತೆ ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದೆ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕಂಪೆನಿಯ ಉನ್ನತ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ನೌಕರರನ್ನು ಏಕೆ ವಜಾಗೊಳಿಸಲಾಗಿದೆ ಎಂಬ ಬಗ್ಗೆ ಊಹಾಪೋಹಗಳು ಶುರುವಾಗಿದೆ.
ಭಾರತವು ಒರಾಕಲ್ ಕಂಪೆನಿಗೆ ಬಹಳ ಹಿಂದಿನಿಂದಲೂ ನಿರ್ಣಾಯಕ ನೆಲೆಯಾಗಿದೆ. 2024ರ ವೇಳೆಗೆ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ, ನೋಯ್ಡಾ ಮತ್ತು ಕೋಲ್ಕತ್ತಾದಂತಹ ಪ್ರಮುಖ ಕೇಂದ್ರಗಳಲ್ಲಿ ಸುಮಾರು 28,824 ನೌಕರರನ್ನು ಒರಾಕಲ್ ನೇಮಿಸಿಕೊಂಡಿತ್ತು.
ಒರಾಕಲ್ ಕಂಪೆನಿಯ ವಜಾ ಕ್ರಮದಿಂದ ಹತ್ತು ಸಿಬ್ಬಂದಿಗಳಲ್ಲಿ ಒಬ್ಬರು ಕೆಲಸ ಕಳೆದುಕೊಂಡಿದ್ದಾರೆ ಎಂದು ಡೇಟಾ ಸೆಂಟರ್ ಡೈನಾಮಿಕ್ಸ್ ವರದಿಯು ತಿಳಿಸಿದೆ. ಇದರಿಂದ ಸಾಫ್ಟ್ವೇರ್ ಅಭಿವೃದ್ಧಿ, ಕ್ಲೌಡ್ ಸೇವೆಗಳು ಮತ್ತು ಗ್ರಾಹಕ ಸಹಾಯ ವಿಭಾಗದ ನೌಕರರು ಹೆಚ್ಚು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.
ನೌಕರರನ್ನು ದಿಢೀರ್ ವಜಾಗೊಳಿಸಲಾಗಿದೆ. "ಪುನರ್ರಚನೆ" ಕ್ರಮದ ಭಾಗವಾಗಿ ವಜಾಗೊಳಿಸಲಾಗಿದೆ ಎಂದು ಒರಾಕಲ್ ಅಧಿಕೃತವಾಗಿ ಹೇಳಿದೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಆತಂಕವನ್ನು ಹುಟ್ಟು ಹಾಕಿದೆ.
ಒರಾಕಲ್ ಕಂಪೆನಿಯು ನೌಕರರನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡ ಸಮಯ ಈಗ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ವಜಾ ಪ್ರಕ್ರಿಯೆಗೆ ಮೊದಲು ಒರಾಕಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲ್ಯಾರಿ ವಿಲ್ಸನ್ ಅವರು ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮಾತುಕತೆಯಲ್ಲಿ ಸ್ಥಳೀಯ ನೇಮಕಾತಿ, ರಾಷ್ಟ್ರೀಯ ದತ್ತಾಂಶ ಭದ್ರತೆ ಮತ್ತು ತಂತ್ರಜ್ಞಾನ ಸಹಭಾಗಿತ್ವ ಪ್ರಮುಖವಾಗಿದ್ದವು ಎಂದು ಹೇಳಲಾಗಿದೆ.
ಇದಲ್ಲದೆ ಒರಾಕಲ್ ಓಪನ್ಎಐ ಜೊತೆ ಪ್ರಮುಖ ಒಪ್ಪಂದವನ್ನು ಮಾಡಿಕೊಂಡಿದೆ.
"ಟ್ರಂಪ್ ಅವರ ಒತ್ತಾಯಕ್ಕೆ ಮಣಿದು ಕಂಪೆನಿಯು ಅಮೆರಿಕದ ಕಡೆಗೆ ಸಂಪನ್ಮೂಲಗಳನ್ನು ಮರುಹೊಂದಿಸುತ್ತಿದೆ. ಇದು ಟ್ರಂಪ್ ಅವರ ವಿದೇಶಿ ನೇಮಕಾತಿ ಮತ್ತು H-1B ವೀಸಾ ಕಡಿತ ನೀತಿಗೆ ಹೊಂದಿಕೆಯಾಗುತ್ತದೆ" ಎಂದು ತಂತ್ರಜ್ಞಾನ ಉದ್ಯಮದ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒರಾಕಲ್ ಉದ್ಯೋಗಿಗಳನ್ನು ವಜಾಗೊಳಿಸಿರುವುದರಿಂದ ಭಾರತದ ಮೇಲೆ ಹೆಚ್ಚು ಪರಿಣಾಮ ಬೀರಿರಬಹುದು. ಆದರೆ ಉದ್ಯೋಗ ಕಡಿತ ಎದುರಿಸಿರುವುದು ಭಾರತ ಮಾತ್ರವಲ್ಲ, ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊದಲ್ಲಿರುವ ಒರಾಕಲ್ ಸಿಬ್ಬಂದಿಯನ್ನು ಕೂಡ ವಜಾಗೊಳಿಸಲಾಗಿದೆ ಎಂದು ವರದಿಯು ತಿಳಿಸಿದೆ.







