ಕರ್ನಾಟಕದ 8 ಮಂದಿ ಸಹಿತ 131 ಮಂದಿಗೆ ಪದ್ಮ ಗೌರವ; ಮಮ್ಮುಟ್ಟಿಗೆ ಪದ್ಮಭೂಷಣ, ರೋಹಿತ್ ಶರ್ಮಾ, ಹರ್ಮನ್ ಪ್ರೀತ್ ಕೌರ್ ಗೆ ಪದ್ಮಶ್ರೀ

ಧರ್ಮೇಂದ್ರ - ಮಮ್ಮುಟ್ಟಿ, ರೋಹಿತ್ ಶರ್ಮಾ, ಹರ್ಮನ್ ಪ್ರೀತ್ ಕೌರ್ | Photo Credit: PTI, X/@mammukka
ಹೊಸದಿಲ್ಲಿ: ಈ ಬಾರಿ ಒಟ್ಟು 131 ಸಾಧಕರನ್ನು ಪದ್ಮ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಇಬ್ಬರನ್ನು ಜಂಟಿಯಾಗಿ ಪ್ರಶಸ್ತಿಯಾಗಿ ಪರಿಗಣಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
ಕಲೆ, ಸಾರ್ವಜನಿಕ ವ್ಯವಹಾರಗಳು, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾಮಾಜಿಕ ಕಾರ್ಯ, ವ್ಯಾಪಾರ ಮತ್ತು ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಲಾದ ಅಸಾಧಾರಣ ಸೇವೆಗಳನ್ನು ಈ ಪ್ರಶಸ್ತಿಗಳು ಗುರುತಿಸಿವೆ. ಈ ವರ್ಷದ ಪುರಸ್ಕೃತರ ಪಟ್ಟಿಯಲ್ಲಿ 19 ಮಹಿಳಾ ಪುರಸ್ಕೃತರು, ವಿದೇಶಿಯರು/ಎನ್ಆರ್ಐ/ಪಿಐಒ/ಒಸಿಐ ವರ್ಗದಿಂದ 6 ಮಂದಿ ಹಾಗೂ 16 ಮರಣೋತ್ತರ ಪ್ರಶಸ್ತಿ ಗೌರವಗಳು ಸೇರಿವೆ.
ಈ ಬಾರಿ ಕರ್ನಾಟಕದಿಂದ ಎಂಟು ಮಂದಿ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶತಾವಧಾನಿ ಆರ್. ಗಣೇಶ್ ಅವರನ್ನು ಕಲಾ ವಿಭಾಗದಿಂದ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನುಳಿದಂತೆ 7 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂಕೆ ಗೌಡ (ಸಮಾಜಕಾರ್ಯ), ಎಸ್.ಜಿ. ಸುಶೀಲಮ್ಮ (ಸಮಾಜಕಾರ್ಯ), ಶಶಿ ಶೇಖರ್ ವೆಂಪತಿ (ಸಾಹಿತ್ಯ), ಡಾ. ಸುರೇಶ್ ಹಂಗನವಾಡಿ (ವೈದ್ಯಕೀಯ), ಟಿ.ಟಿ. ಜಗನ್ನಾಥನ್ (ವ್ಯಾಪಾರ ಮತ್ತು ಕೈಗಾರಿಕೆ), ಶುಭಾ ವೆಂಕಟೇಶ ಅಯ್ಯಂಗಾರ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಮತ್ತು ಪ್ರಭಾಕರ್ ಬಸವಪ್ರಭು ಕೋರೆ (ಸಾಹಿತ್ಯ ಮತ್ತು ಶಿಕ್ಷಣ) ಕ್ಷೇತ್ರದಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅಪಾರ ಕೊಡುಗೆಗಾಗಿ ಹಿರಿಯ ನಟ ಧರ್ಮೇಂದ್ರ ಸಿಂಗ್ ಡಿಯೋಲ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಪದ್ಮವಿಭೂಷಣ ಪುರಸ್ಕೃತರಲ್ಲಿ ಪಿಟೀಲು ವಾದಕಿ ಎನ್. ರಾಜಮ್, ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ), ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಕೆ.ಟಿ. ಥಾಮಸ್ ಹಾಗೂ ಸಾಹಿತಿ ಪಿ. ನಾರಾಯಣನ್ ಸೇರಿದ್ದಾರೆ.
13 ಪದ್ಮಭೂಷಣ ಪುರಸ್ಕೃತರ ಪಟ್ಟಿಯಲ್ಲಿ ಗಾಯಕಿ ಅಲ್ಕಾ ಯಾಗ್ನಿಕ್, ನಟ ಮಮ್ಮುಟ್ಟಿ, ಕ್ರಿಕೆಟಿಗ–ರಾಜಕಾರಣಿ ವಿಜಯ್ ಅಮೃತರಾಜ್, ಬ್ಯಾಂಕರ್ ಉದಯ್ ಕೊಟಕ್ ಹಾಗೂ ಜಾಹೀರಾತು ಕ್ಷೇತ್ರದ ತಜ್ಞ ಪಿಯೂಷ್ ಪಾಂಡೆ (ಮರಣೋತ್ತರ) ಪ್ರಮುಖರಾಗಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಭಗತ್ ಸಿಂಗ್ ಕೋಶ್ಯಾರಿ, ಶಿಬು ಸೊರೆನ್ (ಮರಣೋತ್ತರ) ಮತ್ತು ವೆಲ್ಲಪ್ಪಳ್ಳಿ ನಟೇಶನ್ ಕೂಡ ಈ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.
113 ಪದ್ಮಶ್ರೀ ಪುರಸ್ಕೃತರ ಪಟ್ಟಿಯಲ್ಲಿ ಕ್ರೀಡೆ, ಕಲೆ, ವೈದ್ಯಕೀಯ, ವಿಜ್ಞಾನ ಮತ್ತು ಸಮಾಜಸೇವೆಯಂತಹ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟಿಗರಾದ ರೋಹಿತ್ ಶರ್ಮಾ, ಹರ್ಮನ್ಪ್ರೀತ್ ಕೌರ್ ಮತ್ತು ಸವಿತಾ ಪುನಿಯಾ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಇತರ ಪುರಸ್ಕೃತರಲ್ಲಿ ನಟ ಪ್ರೊಸೆನ್ಜಿತ್ ಚಟರ್ಜಿ, ತಬಲಾ ವಾದಕ ಕುಮಾರ್ ಬೋಸ್, ಆಂಕೊಲಾಜಿಸ್ಟ್ ಡಾ. ಪ್ರತೀಕ್ ಶರ್ಮಾ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು ಸೇರಿದ್ದಾರೆ.
ಪುರಾತತ್ವ, ಕೃಷಿ, ಪಶುಸಂಗೋಪನೆ ಮತ್ತು ಸಾಂಪ್ರದಾಯಿಕ ಕಲೆಗಳಂತಹ ಕ್ಷೇತ್ರಗಳಲ್ಲಿ ಸಮಾಜಿಕ ಕೊಡುಗೆ ನೀಡಿದವರನ್ನು ಈ ಬಾರಿ ವಿಶೇಷವಾಗಿ ಗುರುತಿಸಲಾಗಿದೆ. ತಳಮಟ್ಟದ ಸೇವೆ ಮತ್ತು ಸಾಮಾಜಿಕ ಪ್ರಭಾವವನ್ನು ಪರಿಗಣಿಸಿರುವುದು ಈ ಆಯ್ಕೆಗಳಲ್ಲಿ ಸ್ಪಷ್ಟವಾಗಿದೆ.
ಪದ್ಮ ಪ್ರಶಸ್ತಿಗಳನ್ನು 2026ರ ಮಾರ್ಚ್ ಅಥವಾ ಏಪ್ರಿಲ್ನಲ್ಲಿ, ರಾಷ್ಟ್ರಪತಿ ಭವನದಲ್ಲಿ ನಡೆಯುವ ಔಪಚಾರಿಕ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ. ವಿವಿಧ ರಾಜ್ಯಗಳು, ಸಮುದಾಯಗಳು ಮತ್ತು ಕ್ಷೇತ್ರಗಳಿಗೆ ಸಮಾನ ಪ್ರಾತಿನಿಧ್ಯ ಒದಗಿಸುವ ಮೂಲಕ ರಾಷ್ಟ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದವರನ್ನು ಗೌರವಿಸುವ ಪರಂಪರೆಯನ್ನು ಈ ವರ್ಷದ ಆಯ್ಕೆಗಳು ಮುಂದುವರೆಸಿವೆ.







