ಕೇರಳ | ಪದ್ಮಶ್ರೀ ಪುರಸ್ಕೃತೆ ಕೆ.ವಿ. ರಬಿಯಾ ನಿಧನ

Photo | indianexpress
ಮಲಪ್ಪುರಂ: ಸಾಕ್ಷರತೆಯನ್ನು ಉತ್ತೇಜಿಸುವಲ್ಲಿ ಅವಿರತ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದ ಖ್ಯಾತ ಸಮಾಜ ಸೇವಕಿ, ಪದ್ಮಶ್ರೀ ಕೆ.ವಿ. ರಬಿಯಾ ರವಿವಾರ ಕೊಟ್ಟಕ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ವರದಿ ಪ್ರಕಾರ ಕೆ.ವಿ. ರಬಿಯಾ(59) ದೀರ್ಘಕಾಲದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು.
ಪೋಲಿಯೊದಿಂದ ಬಳಲುತ್ತಿದ್ದರೂ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ 2022ರಲ್ಲಿ ಕೆ.ವಿ. ರಬಿಯಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕೆ.ವಿ. ರಬಿಯಾ 1994ರಲ್ಲಿ ಭಾರತ ಸರಕಾರದ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಪಡೆದಿದ್ದರು. ಮಹಿಳೆಯರ ಸಬಲೀಕರಣಕ್ಕಾಗಿ ಅವರು ಮಾಡಿದ ಕಾರ್ಯವನ್ನು ಗುರುತಿಸಿ 2001ರ ಜನವರಿಯಲ್ಲಿ ಅವರಿಗೆ ಮೊದಲ ಕಣ್ಣಗಿ ಸ್ತ್ರೀ ಶಕ್ತಿ ಪುರಸ್ಕಾರವನ್ನು ನೀಡಲಾಯಿತು.
ತಿರುರಂಗಡಿ ಮೂಲದ ಕರಿವೇಪ್ಪಿಲ್ ಮೂಸಕ್ಕುಟ್ಟಿ ಮತ್ತು ಬಿಯಾಚುಟ್ಟಿ ಹಜ್ಜುಮ್ಮ ದಂಪತಿಗಳ ಪುತ್ರಿಯಾಗಿ 1966ರ ಫೆಬ್ರವರಿ 25ರಂದು ಜನಿಸಿದ ರಬಿಯಾ, ಚಂದಪ್ಪಾಡಿ ಜಿಎಲ್ಪಿ ಶಾಲೆ ಮತ್ತು ತಿರುರಂಗಡಿ ಸರಕಾರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.15ನೇ ವಯಸ್ಸಿನಲ್ಲಿ ಪೋಲಿಯೊ ರೋಗಕ್ಕೆ ತುತ್ತಾದ ರಬಿಯಾ ಗಾಲಿಕುರ್ಚಿಯಲ್ಲಿಯೇ ಜೀವನ ಸಾಗಿಸಬೇಕಾಯಿತು. ತಿರುರಂಗಡಿಯ ಪಿಎಸ್ಎಂಒ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಸೇರಿಕೊಂಡರೂ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು. ಕೇರಳದ ಸಂಪೂರ್ಣ ಸಾಕ್ಷರತಾ ಮಿಷನ್ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿತು.
2000ದಲ್ಲಿ ರಬಿಯಾ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. 38ನೇ ವಯಸ್ಸಿನಲ್ಲಿ ರಬಿಯಾ ಬಿದ್ದು ಬೆನ್ನುಮೂಳೆ ಮುರಿದುಕೊಂಡರು. ಆ ಬಳಿಕ ಕುತ್ತಿಗೆಯಿಂದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ರಬಿಯಾ ತನ್ನ ದೈಹಿಕ ಸವಾಲುಗಳ ಹೊರತಾಗಿಯೂ ಸಮಾಜ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ಆತ್ಮಚರಿತ್ರೆ ʼಸ್ವಪ್ನಗಲ್ಕು ಚಿರಕುಕಲುಂಡ್ʼ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಬರೆದಿದ್ದರು.







