ಪಹಲ್ಗಾಮ್ ಭಯೋತ್ಪಾದಕ ದಾಳಿ | ಪಾಕಿಸ್ತಾನಕ್ಕೆ ಪಾಠ ಕಲಿಸಲು ಇದು ತಕ್ಕ ಸಮಯ: ಕಾಂಗ್ರೆಸ್

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಭಯೋತ್ಪಾದನೆಗೆ ನಿರಂತರವಾಗಿ ಕುಮ್ಕಕ್ಕು ನೀಡುತ್ತಿರುವ ಪಾಕಿಸ್ತಾನವನ್ನು ದಂಡಿಸಲು ಕೇಂದ್ರ ಸರಕಾರ ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶುಕ್ರವಾರ ಆಗ್ರಹಿಸಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ, ಭಾರಿ ಭದ್ರತೆ ಹೊಂದಿರುವ ಪ್ರಾಂತ್ಯಗಳಲ್ಲಿ ಆಗಿರುವ ಭದ್ರತಾ ಹಾಗೂ ಗುಪ್ತಚರ ಲೋಪಗಳಿಗೆ ಸಂಬಂಧಿಸಿದಂತೆ ಹೊಣೆ ಹೊರಬೇಕು ಎಂದು ಒತ್ತಿ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.
"ಇಡೀ ದೇಶ ನ್ಯಾಯಕ್ಕಾಗಿ ಎದುರು ನೋಡುತ್ತಿದೆ.ಇದು ರಾಜಕೀಯ ಮಾಡುವ ಸಮಯವಲ್ಲ; ಬದಲಾಗಿ ಐಕ್ಯತೆ, ಸಾಮರ್ಥ್ಯ ಹಾಗೂ ರಾಷ್ಟ್ರೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಕ್ಷಣವಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ನಂಬಿಕೆಯಾಗಿದೆ", ಎಂದು ಈ ನಿರ್ಣಯದಲ್ಲಿ ಹೇಳಲಾಗಿದೆ.
"ನಾವು ಪಕ್ಷವಾರು ಭಿನ್ನಾಭಿಪ್ರಾಯಗಳನ್ನು ಮೀರಬೇಕಿದೆ. ಭಾರತ ಒಗ್ಗಟ್ಟಾಗಿ ನಿಂತಿದೆ ಮತ್ತು ಅದನ್ನು ಒಡೆಯಲು ಸಾಧ್ಯವಿಲ್ಲ ಎಂಬ ನಿಸ್ಸಂದಿಗ್ಧ ಸಂದೇಶವನ್ನು ರವಾನಿಸಬೇಕಿದೆ", ಎಂದೂ ಈ ನಿರ್ಣಯದಲ್ಲಿ ಅಭಿಪ್ರಾಯ ಪಡಲಾಗಿದೆ.
"ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಹಾಗೂ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ನಾವು ಒಂದು ದೇಶವಾಗಿ ಸಾಮೂಹಿಕ ಇಚ್ಛಾಶಕ್ತಿ ಪ್ರದರ್ಶಿಸಬೇಕಿರುವ ಹೊತ್ತು ಇದಾಗಿದೆ" ಎಂದೂ ನಿರ್ಣಯದಲ್ಲಿ ಕರೆ ನೀಡಲಾಗಿದೆ.







