ಪಹಲ್ಗಾವ್ ದಾಳಿ: ಗುಪ್ತಚರ ವೈಫಲ್ಯಗಳಿಗೆ ಯಾರು ಹೊಣೆ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ಮಲ್ಲಿಕಾರ್ಜುನ ಖರ್ಗೆ | PTI
ಹೊಸದಿಲ್ಲಿ,ಜು.29: ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಆಪರೇಶನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸುಳ್ಳುಗಳ ಕಾರ್ಖಾನೆಗಳನ್ನೇ ಸ್ಥಾಪಿಸಲಾಗಿದೆ ಹಾಗೂ ಪದೇ ಪದೇ ಸಂಭವಿಸುತ್ತಿರುವ ಗುಪ್ತಚರ ವೈಫಲ್ಯಗಳಿಗೆ ಯಾರು ಹೊಣೆಗಾರರೆಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಎಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ ರಾಜ್ಯಸಭಾದ ಪ್ರತಿಪಕ್ಷ ನಾಯಕ, ಆಡಳಿತ ಪಕ್ಷದ ಸದಸ್ಯರು, ನೈಜ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆಂದು ಆಪಾದಿಸಿದರು.
‘‘ಕಾಂಗ್ರೆಸ್ ಪಕ್ಷದ ಇತಿಹಾಸವು ಸುದೀರ್ಘವಾದುದು. ರಾಷ್ಟ್ರನಿರ್ಮಾಣಕ್ಕೆ ನಮ್ಮ ಕೊಡುಗೆಯು ಅಪಾರವಾಗಿದೆ. ಆದರೆ ನೀವು (ಬಿಜೆಪಿ ಸರಕಾರ) ಸಾರ್ವಜನಿಕ ರಂಗದ ಒಂದೇ ಒಂದು ಘಟಕವನ್ನೂ ಸ್ಥಾಪಿಸಿಲ್ಲ. ಕೇವಲ ಸುಳ್ಳುಗಳ ಕಾರ್ಖಾನೆಯನ್ನೇ ಸ್ಥಾಪಿಸಿದ್ದೀರಿ. ಎಚ್ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ಮತ್ತಿತರ ಸಾರ್ವಜನಿಕರಂಗದ ಘಟಕಗಳನ್ನು ನೀವು ಸೃಷ್ಟಿಸಿದ್ದೀರಾ?’’ ಎಂದು ಖರ್ಗೆ ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಭಯೋತ್ಪಾದನೆಯನ್ನು ತೊಡೆದುಹಾಕಲಾಗಿದೆ ಎಂದವರು ಹೇಳಿದ್ದಾರೆ. ಒಂದು ವೇಳೆ ಭಯೋತ್ಪಾದನೆಯನ್ನು ತೊಡೆದುಹಾಕಲಾಗಿದೆ ಎಂದಾದರೆ ಪಹಲ್ಗಾಮ್ ದಾಳಿಯನ್ನು ಹೇಗೆ ನಡೆಸಲಾಯಿತು. ನೀವು ಸತ್ಯಕ್ಕೆ ತುಂಬಾ ದೂರವಾದ ಹಲವು ವಿಷಯಗಳನ್ನು ಹೇಳುತ್ತಾ ಬಂದಿದ್ದೀರಿ ಎಂದು ಖರ್ಗೆ ಟೀಕಿಸಿದರು.
ಪಹಲ್ಗಾಮ್ ದಾಳಿ ಹಾಗೂ ಆಪರೇಶನ್ ಸಿಂಧೂರ್ ಬಗ್ಗೆ ಚರ್ಚಿಸಲು ಸಂಸತ್ನ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪತ್ರಗಳನ್ನು ಬರೆದಿದ್ದರಾದರೂ, ಅದಕ್ಕೆ ಪ್ರತಿಕ್ರಿಯೆಯೇ ದೊರೆತಿಲ್ಲ.
2016ರ ಉರಿ ಹಾಗೂ ಪಠಾಣ್ ಕೋಟ್ ಭಯೋತ್ಪಾದಕ ದಾಳಿಗಳು, 2019ರ ಪುಲ್ವಾಮಾ ದಾಳಿ ಹಾಗೂ ಈ ವರ್ಷದ ಪಹಲ್ಗಾಮ್ ದಾಳಿ ಬಗ್ಗೆ ಗಮನಸೆಳೆದ ಅವರು, ಗುಪ್ತಚರ ವೈಫಲ್ಯಗಳು ಮರುಕಳಿಸುತ್ತವೆ ಎಂಬುದನ್ನು ಸರಕಾರ ಒಪ್ಪಿಕೊಳ್ಳಬೇಕಾಗಿದೆ. ಇದಕ್ಕೆ ಯಾರು ಹೊಣೆಗಾರರೆಂದು ನಾನು ಗೃಹ ಸಚಿವರನ್ನು ಕೇಳಬಯಸುತ್ತೇನೆ.
ಜಮ್ಮುಕಾಶ್ಮೀರದ ಲೆ.ಗವರ್ನರ್ ಮನೋಜ್ ಸಿನ್ಹಾ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭದ್ರತಾ ಲೋಪವಿದೆಯೆಂದು ಹೇಳಿದ್ದಾರೆ ಎಂದು ಖರ್ಗೆ ನೆನಪಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾದ ಮೂವರು ಉಗ್ರರನ್ನು ಹತ್ಯೆಗೈದಿರುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದ್ದರಾದರೂ, ಇತರ ಉಗ್ರರ ಕಥೆಯೇನು? ಅವರೆಲ್ಲಿ ಅವಿತಿದ್ದಾರೆ. ಅವರನ್ನು ಪತ್ತೆ ಹಚ್ಚಲು ಯಾಕೆ ನಿಮಗೆ ಸಾಧ್ಯವಾಗುತ್ತಿಲ್ಲ ಎಂದು ಖರ್ಗೆ , ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಪಹಲ್ಗಾಮ್ ದಾಳಿಗೆ ಕೇವಲ ಮೂರು ದಿನಗಳ ಮುನ್ನ ಪ್ರಧಾನಿ ಮೋದಿಯವರು ತಮ್ಮ ಪೂರ್ವನಿಗದಿತ ಜಮ್ಮುಕಾಶ್ಮೀರ ಪ್ರವಾಸವನ್ನು ರದ್ದುಪಡಿಸಿದರು. ಈ ವಿಷಯವನ್ನು ಈ ಮೊದಲು ಕೂಡಾ ಪ್ರಸ್ತಾವಿಸಲಾಗಿತ್ತು . ಆದರೆ ನನಗೆ ಯಾವುದೇ ಉತ್ತರ ದೊರೆತಿಲ್ಲ. ಈ ದಾಳಿಯನ್ನು ನಡೆಯಲಿದೆಯೆಂಬುದು ಕೇಂದ್ರ ಸರಕಾರಕ್ಕೆ ತಿಳಿದಿತ್ತೇ. ಒಂದು ವೇಳೆ ಹೌದಾದರೆ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಯಾಕೆ ಹೋಗದಂತೆ ತಡೆದಿರಲಿಲ್ಲ?’’ ಎಂದು ರಾಜ್ಯಸಭಾದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.







