"ದಾಳಿಯ ಆರಂಭದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡುವುದು ಅಪರಾಧ": ʼಆಪರೇಷನ್ ಸಿಂಧೂರ್ʼ ಬಗ್ಗೆ ಜೈಶಂಕರ್ ಹೇಳಿಕೆಗೆ ರಾಹುಲ್ ಗಾಂಧಿ ತರಾಟೆ

ಜೈಶಂಕರ್ , ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಭಾರತ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನಕ್ಕೆ ಭಾರತ ಸರಕಾರ ಮೊದಲೇ ಮಾಹಿತಿ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಇದು ಅಪರಾಧ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಭಾರತ ಸರಕಾರ ಪಾಕಿಸ್ತಾನಕ್ಕೆ ಈ ಕ್ರಮದ ಬಗ್ಗೆ ತಿಳಿಸಿತ್ತು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಕ್ಕಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು ಮತ್ತು ಇದರ ಪರಿಣಾಮವಾಗಿ ಭಾರತೀಯ ವಾಯುಪಡೆ ಎಷ್ಟು ವಿಮಾನಗಳನ್ನು ಕಳೆದುಕೊಂಡಿತು ಎಂದು ಕೇಳಿದರು.
ʼನಮ್ಮ ದಾಳಿಯ ಆರಂಭದಲ್ಲಿ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದು ಅಪರಾಧ. ಭಾರತ ಸರಕಾರ ಅದನ್ನು ಮಾಡಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಇದಕ್ಕೆ ಯಾರು ಅನುಮತಿಸಿದರು? ಇದರ ಪರಿಣಾಮವಾಗಿ ನಮ್ಮ ವಾಯುಪಡೆ ಎಷ್ಟು ವಿಮಾನಗಳನ್ನು ಕಳೆದುಕೊಂಡಿದೆ?ʼ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನಕ್ಕೆ ತನ್ನ ನೆಲದಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಭಾರತ ತಿಳಿಸಿದೆ ಎಂದು ಜೈಶಂಕರ್ ಹೇಳಿರುವ ಬಗ್ಗೆ ದಿನಾಂಕವನ್ನು ಉಲ್ಲೇಖಿಸದ ವೀಡಿಯೊವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಕಾರ್ಯಾಚರಣೆಯ ಆರಂಭದಲ್ಲಿ, 'ನಾವು ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಹೊರತು ನಾವು ಮಿಲಿಟರಿಯ ಮೇಲೆ ದಾಳಿ ಮಾಡುತ್ತಿಲ್ಲ ಎಂದು ನಾವು ಪಾಕಿಸ್ತಾನಕ್ಕೆ ಸಂದೇಶವನ್ನು ಕಳುಹಿಸಿದ್ದೆವು. ಈ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡದಿರುವ ಆಯ್ಕೆ ಮಿಲಿಟರಿಗಿದೆ. ಅವರು ಆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದರುʼ ಎಂದು ಜೈಶಂಕರ್ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು.
ಆದರೆ, ಆಪರೇಷನ್ ಸಿಂಧೂರ್ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು ಎಂದು ಜೈಶಂಕರ್ ಹೇಳಿದ್ದರು ಎಂಬ ಹೇಳಿಕೆಯನ್ನು Press Information Bureau ತಳ್ಳಿಹಾಕಿದೆ. PIBಯ ಫ್ಯಾಕ್ಟ್ ಚೆಕ್ ಯೂನಿಟ್ ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಸಚಿವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಅವರನ್ನು ತಪ್ಪಾಗಿ ಉಲ್ಲೇಖಿಸಲಾಗುತ್ತಿದೆ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ:
ರಾಹುಲ್ ಗಾಂಧಿ ಆರೋಪವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರಸ್ಕರಿಸಿದೆ. ಅಲ್ಲದೆ ಅವರ ಹೇಳಿಕೆ ‘ಸತ್ಯದ ತಪ್ಪು ನಿರೂಪಣೆ’ ಎಂದು ಕರೆದಿದೆ. ‘ಆಪರೇಷನ್ ಸಿಂಧೂರ’ ಆರಂಭವಾದ ನಂತರ ಮೊದಲ ಹಂತದಲ್ಲಿ ಸರಕಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತು. ಕಾರ್ಯಾಚರಣೆ ಆರಂಭವಾಗುವುದಕ್ಕಿಂತ ಮುನ್ನ ಎಚ್ಚರಿಕೆ ನೀಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.







