Pakistan | ಆಸ್ಪತ್ರೆಗೆ ಸ್ಥಳಾಂತರಿಸಿದ ಕೆಲವೇ ಗಂಟೆಗಳಲ್ಲಿ ಇಮ್ರಾನ್ ಖಾನ್ ವಾಪಸ್ ಜೈಲಿಗೆ!

ಇಮ್ರಾನ್ ಖಾನ್ (PTI)
ಇಸ್ಲಾಮಾಬಾದ್, ಆ.21: ಕಣ್ಣಿನ ಕಾಯಿಲೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಸ್ಲಾಮಾಬಾದ್ ನ ಶಿಫಾ ಅಂತಾರಾಷ್ಟ್ರೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ತಿಳಿಸಿದೆ.
73 ವರ್ಷದ ಇಮ್ರಾನ್ ಖಾನ್ ಅವರು ಸೆಪ್ಟೆಂಬರ್ 16ರವರೆಗೆ ಆಸ್ಪತ್ರೆಯಲ್ಲಿ ಇರಬೇಕಿತ್ತು. ಅಂದು ಅವರ ಮುಂದಿನ ವಿಚಾರಣೆ ನಿಗದಿಯಾಗಿತ್ತು. ಹೀಗಿದ್ದರೂ, ಆಸ್ಪತ್ರೆಗೆ ಸ್ಥಳಾಂತರಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಮತ್ತೆ ಜೈಲಿಗೆ ಕರೆದೊಯ್ಯಲಾಗಿದೆ.
2022ರಲ್ಲಿ ಅಧಿಕಾರದಿಂದ ಪದಚ್ಯುತಗೊಂಡ ಇಮ್ರಾನ್ ಖಾನ್ ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ. ಮಾಜಿ ಕ್ರಿಕೆಟಿಗ - ರಾಜಕಾರಣಿಯಾಗಿರುವ ಅವರ ಆರೋಗ್ಯದ ಬಗ್ಗೆ ಅವರ ಪಕ್ಷ ಕಳವಳ ವ್ಯಕ್ತಪಡಿಸಿತ್ತು.
ಇಮ್ರಾನ್ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದನ್ನು ಪಿಟಿಐ ಪಕ್ಷ ಈ ಹಿಂದೆ ಎಕ್ಸ್ನಲ್ಲಿ ಸ್ವಾಗತಿಸಿತ್ತು. ‘ಇಮ್ರಾನ್ ಖಾನ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿರುವುದು ನಮ್ಮ ಅಂತಿಮ ಗುರಿಯಲ್ಲ. ಇದು ಸ್ವಾತಂತ್ರ್ಯದ ಹೋರಾಟದ ಒಂದು ಹಂತ ಮಾತ್ರ. ಇಮ್ರಾನ್ ಖಾನ್ ಅವರ ನಿಜವಾದ ಸ್ವಾತಂತ್ರ್ಯವೇ ನಮ್ಮ ಅಂತಿಮ ಗುರಿʼ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಹೇಳಿತ್ತು.






