ವ್ಯಾಪಕ ಹಿಂಸಾಚಾರದ ನಡುವೆ ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಇಂದು ಆರಂಭ

ಕೋಲ್ಕತ್ತಾ: ವ್ಯಾಪಕ ಹಿಂಸಾಚಾರ ಮತ್ತು ಹತ್ಯೆಗಳ ನಡುವೆ, 2024 ರ ಸಂಸತ್ತಿನ ಚುನಾವಣೆಗೆ ಅಗ್ನಿಪರೀಕ್ಷೆ ಎನಿಸಿರುವ ರಾಜ್ಯದ ರಾಜಕೀಯ ಚಿತ್ರಣವನ್ನು ಬದಲಿಸುವ ಶಕ್ತಿಯನ್ನು ಹೊಂದಿರುವ ನಿರ್ಣಾಯಕ ಪಂಚಾಯತ್ ಚುನಾವಣೆ ಒಂದೇ ಹಂತದಲ್ಲಿ ಗ್ರಾಮೀಣ ಪಶ್ಚಿಮ ಬಂಗಾಳದಲ್ಲಿ ಇಂದು ಆರಂಭವಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತನ್ನ ಮೂವರು ಸ್ವಯಂಸೇವಕರನ್ನು ಹತ್ಯೆಗೈಯಲಾಗಿದೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದು, ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳ ಕಡೆಯಿಂದ "ದೊಡ್ಡ ವೈಫಲ್ಯ" ವಾಗಿದೆ ಎಂದು ಆರೋಪಿಸಿದೆ.
ಕೂಚ್ ಬಿಹಾರ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಆ ಪಕ್ಷ ಹೇಳಿದೆ. ಅದೇ ಜಿಲ್ಲೆಯ ಶಾಲೆಯೊಂದರಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಲಾಗಿದೆ ಹಾಗೂ ಮತಪತ್ರಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
22 ಜಿಲ್ಲಾ ಪರಿಷತ್ ಗಳು, 9,730 ಪಂಚಾಯತ್ ಸಮಿತಿಗಳು ಮತ್ತು 63,229 ಗ್ರಾಮ ಪಂಚಾಯತ್ ಸೀಟುಗಳಲ್ಲಿ ಸುಮಾರು 928 ಸ್ಥಾನಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸುಮಾರು 5.67 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಜೂನ್ 8 ರಂದು ಚುನಾವಣೆ ಘೋಷಣೆಯಾದ ದಿನದಿಂದ, ಬಂಗಾಳದಾದ್ಯಂತ ವ್ಯಾಪಕ ಹಿಂಸಾಚಾರ ವರದಿಯಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ಹದಿಹರೆಯದವರು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ.







