ನಿಗೂಢ ಕಾಯಿಲೆಗೆ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತ್ಯು

ಸಾಂದರ್ಭಿಕ ಚಿತ್ರ (PTI)
ಚಂಡೀಗಢ: ಒಂದೇ ಕುಟುಂಬದ ನಾಲ್ವರು ಮಕ್ಕಳು ನಿಗೂಢವಾಗಿ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಹರ್ಯಾಣ ರಾಜ್ಯದ ನೂಹ್ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆಯಿಂದ ಅಲ್ಲಿನ ನಿವಾಸಿಗಳೆಲ್ಲ ಭಯಭೀತರಾಗಿದ್ದಾರೆ. ಮೃತಪಟ್ಟಿರುವ ಮಕ್ಕಳು 4ರಿಂದ 7 ವರ್ಷದ ವಯೋಮಾನದವರಾಗಿದ್ದು, ಅವರೆಲ್ಲ ಚಹಲ್ಕಾ ಗ್ರಾಮದ ಧಾನಿ ಪ್ರದೇಶದ ನಿವಾಸಿಗಳಾಗಿದ್ದಾರೆ. ಅವರು ಅಕ್ಟೋಬರ್ 19ರಿಂದ ಅಸ್ವಸ್ಥರಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತಾದರೂ, ಅಸ್ವಸ್ಥತೆಯಿಂದ ಒಬ್ಬರ ನಂತರ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು newindianexpress.com ವರದಿ ಮಾಡಿದೆ.
ಅಕ್ಟೋಬರ್ 19ರಂದು ಅದ್ನಾನ್ ಎಂಬ ನಾಲ್ಕು ವರ್ಷದ ಬಾಲಕನು ವಾಂತಿ ಮಾಡಿಕೊಂಡು ಪ್ರಜ್ಞಾಹೀನನಾಗಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ನಂತರ ಆತನನ್ನು ಭಿವಾಂಡಿಗೆ ರವಾನಿಸಲಾಗಿದೆ. ಆದರೆ, ಆತ 24 ಗಂಟೆಯೊಳಗೆ ಮೃತಪಟ್ಟಿದ್ದಾನೆ. ಕುಟುಂಬದ ಸದಸ್ಯರು ಆತನ ಮೃತದೇಹದೊಂದಿಗೆ ಮನೆಗೆ ಮರಳಿದಾಗ ಆತನ 7 ವರ್ಷದ ಸಹೋದರಿ ಕೂಡಾ ಅದೇ ಬಗೆಯ ರೋಗ ಲಕ್ಷಣಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದ್ದಾಳೆ. ಆಕೆಯನ್ನು ಕೂಡಲೇ ನೂಹ್ ಬಳಿಯಿರುವ ನಲ್ಹರ್ ವೈದ್ಯಕೀಯ ಕಾಲೇಜಿಗೆ ಸಾಗಿಸಲಾಯಿತಾದರೂ ಆಕೆ ಕೂಡಾ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾಳೆ.
ಆ ಮಕ್ಕಳ ಕುಟುಂಬವು ಅವರ ಅಂತ್ಯ ಕ್ರಿಯೆಯನ್ನು ಔಪಚಾರಿಕವಾಗಿ ಮುಗಿಸುವ ಬೆನ್ನಿಗೇ ಆ ಮಕ್ಕಳ ಸಹೋದರ ಸಂಬಂಧಿಗಳಾದ ನಾಲ್ಕು ವರ್ಷ ವಯಸ್ಸಿನ ನಾಝಿಶ್ ಹಾಗೂ ದಾನಿಶ್ ಕೂಡಾ ಅದೇ ಬಗೆಯ ರೋಗ ಲಕ್ಷಣಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದ್ದಾರೆ. ಅವರಿಬ್ಬರನ್ನೂ ಅಲ್ವಾರ್ ಹಾಗೂ ಫರೀದಾಬಾದ್ ವೈದ್ಯಕೀಯ ಕಾಲೇಜುಗಳಿಗೆ ಕೊಂಡೊಯ್ಯಲಾಯಿತಾದರೂ ಅವರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬೆಳವಣಿಗೆಯಿಂದ ಪರಸ್ಪರ ಸಂಬಂಧ ಹೊಂದಿರುವ 17 ಕುಟುಂಬಗಳ ಆ ಗ್ರಾಮದಲ್ಲೀಗ ಭೀತಿ ಮನೆ ಮಾಡಿದೆ.
ಮಕ್ಕಳು ಎನ್ಸೆಫಲೈಟಿಸ್ ಸೋಂಕಿಗೆ ತುತ್ತಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದರೂ, ಆ ಮಕ್ಕಳ ಬೆನ್ನು ಮೂಳೆಯ ದ್ರವವನ್ನು ಸಂಗ್ರಹಿಸಲು ಸಾಧ್ಯವಾಗದೆ ಇರುವುದರಿಂದ ರಾಜ್ಯ ಆರೋಗ್ಯ ಇಲಾಖೆಯು ಈ ಸಂಗತಿಯನ್ನು ದೃಢಪಡಿಸಲು ಸಾಧ್ಯವಾಗಿಲ್ಲ. ಸದ್ಯ, ಆ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಹತ್ತು ತಂಡಗಳನ್ನು ನಿಯೋಜಿಸಲಾಗಿದ್ದು, ಆ ಪ್ರದೇಶದಲ್ಲಿ ಜ್ವರ ಸಮೀಕ್ಷೆ ಹಾಗೂ ರೋಗ ನಿರೋಧಕ ಅಭಿಯಾನವನ್ನು ನಡೆಸಲಾಗುತ್ತಿದೆ.







