ಕರೋಲ್ ಹಾಡುತ್ತಿದ್ದ ಮಕ್ಕಳ ಮೇಲಿನ ದಾಳಿಯ ಸಮರ್ಥನೆ; ಬಿಜೆಪಿ ಮುಖಂಡನ ವಿರುದ್ಧ ಪೋಷಕರ ಪ್ರತಿಭಟನೆ

Photo Credit ; X
ಪಾಲಕ್ಕಾಡ್: ಕ್ರಿಸ್ಮಸ್ ಕರೋಲ್ ಹಾಡುತ್ತಿದ್ದ ಮಕ್ಕಳ ಗುಂಪಿನ ಮೇಲೆ ದಾಳಿ ನಡೆದ ಕ್ರಮ ಒಂದೆಡೆ ಕೇರಳದಲ್ಲಿ ರಾಜಕೀಯ ಪ್ರತಿಭಟನೆಗಳಿಗೆ ಕಾರಣವಾಗಿದ್ದರೆ, ಸಾರ್ವನಿಕರು ಕೂಡಾ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಮುಖಂಡ ಸಿ.ಕೃಷ್ಣಕುಮಾರ್ ಅವರ ವಿರುದ್ಧ ಮಕ್ಕಳ ಪೋಷಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
"ಕರೋಲ್ ತಂಡ ಅಪರಾಧಿಗಳ ಗುಂಪಾಗಿದ್ದು, ಸದಸ್ಯರು ಪಾನಮತ್ತರಾಗಿದ್ದರು" ಎಂದು ಕೃಷ್ಣಕುಮಾರ್ ಹೇಳಿಕೆ ನೀಡಿದ್ದರು. ಸಿಪಿಎಂ ಕ್ಷೇತ್ರ ಸಮಿತಿ ಕಚೇರಿಯಿಂದ ಈ ತಂಡ ಬ್ಯಾಂಡ್ಸೆಟ್ ಆರಂಭಿಸಿತ್ತು.
"ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕರೋಲ್ ನಡೆಸುತ್ತಿದ್ದರು. ಈ ಘಟನೆ ನಡೆದಾಗ ತಂಡದಲ್ಲಿ 10-15 ವರ್ಷ ವಯಸ್ಸಿನ ಮಕ್ಕಳು ಮಾತ್ರ ಇದ್ದರು. ಯಾವ ವಯಸ್ಕರೂ ಇರಲಿಲ್ಲ" ಎಂದು ಪೋಷಕರು ಬುಧವಾರ ಹೇಳಿಕೆ ನೀಡಿದ್ದಾರೆ.
ಈ ಘಟನೆಯಿಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬದವರಿಗೆ ತೊಂದರೆಯಾಗಿದೆ. ಕೃಷ್ಣಕುಮಾರ್ ಹೇಳಿಕೆ ಮತ್ತೂ ಕಳವಳಕಾರಿ. ಈ ಹೇಳಿಕೆಯ ಬಳಿಕ ಮಕ್ಕಳು ಅನುಭವಿಸಿದ ಮಾನಸಿಕ ಉದ್ವಿಗ್ನತೆ ಕುರಿತು ದೂರು ನೀಡಲು ಕೂಡಾ ಯೋಚಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಈ ಘಟನೆಯನ್ನು ಖಂಡಿಸುವ ಸಲುವಾಗಿ ಜಿಲ್ಲೆಯ ಎಲ್ಲ 2500 ಘಟಕಗಳಲ್ಲಿ ಕೂಡ ಕರೋಲ್ ನಡೆಸಲಾಗುವುದು ಎಂದು ಡಿವೈಎಫ್ಐ ಹೇಳಿಕೆ ನೀಡಿದೆ. ಕ್ರಿಶ್ಚಿಯನ್ ಸಮುದಾಯದ ಬೆಂಬಲ ಗಳಿಸುವಲ್ಲಿ ವಿಫಲವಾಗಿರುವುದಕ್ಕೆ ಪ್ರತೀಕಾರವಾಗಿ ಬಿಜೆಪಿ ಈ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕದಡುವ ಪ್ರಯತ್ನ ಇದಾಗಿದೆ ಎಂದು ಆಪಾದಿಸಿದೆ. ಘಟನೆಯ ಸಂಬಂಧ ಆರೆಸ್ಸೆಸ್ ಕಾರ್ಯಕರ್ತ ಅಶ್ವಿನ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.







