ಗಿನ್ನೆಸ್ ದಾಖಲೆ ಸೃಷ್ಟಿಸಿದ ಮೋದಿಯವರ 'ಪರೀಕ್ಷಾ ಪೇ ಚರ್ಚಾ'

PC : @PBSHABD
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ ಪರೀಕ್ಷಾ ಪೇ ಚರ್ಚಾ (ಪಿಪಿಸಿ) 2025 ಹೊಸ ಗಿನ್ನೆಸ್ ದಾಖಲೆ ಸೃಷ್ಟಿಸಿದೆ. 3.5 ಕೋಟಿ ಅಧಿಕೃತವಾಗಿ ಕಾರ್ಯಕ್ರಮಕ್ಕೆ 'MYGOV' ಪ್ಲಾಟ್ಫಾರಂನಲ್ಲಿ ನೋಂದಾಯಿಸಿಕೊಂಡಿದ್ದು, ನಾಗರಿಕ ತೊಡಗಿಸಿಕೊಳ್ಳುವಿಕೆ ವೇದಿಕೆಯಲ್ಲಿ ಒಂದು ತಿಂಗಳಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ಇದು ಭಾರತದ ಹೆಚ್ಚುತ್ತಿರುವ ನಾಗರಿಕ ಡಿಜಿಟಲ್ ಪಾಲ್ಗೊಳ್ಳುವಿಕೆಗೆ ಮತ್ತು ಶಿಕ್ಷಣ ಉದ್ದೇಶದ ಸಂವಾದದ ಹೊಸ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.
ಗಿನ್ನೆಸ್ ವಿಶ್ವದಾಖಲೆ ನಿರ್ಣಯಕಾರರ ತಂಡದ ಪರವಾಗಿ ರಿಷಿನಾಥ್ ಅವರು ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಐಟಿ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ಜಿತಿನ್ ಪ್ರಸಾದ್, ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ಮತ್ತು MYGOV ಸಿಇಓ ನಂದಕುಮಾರನ್ ಸಮ್ಮುಖದಲ್ಲಿ ಅಧಿಕೃತ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು.
ಪರೀಕ್ಷಾ ಪೇ ಚರ್ಚಾ ಆರಂಭವಾದ 2018ರಿಂದಲೂ ಪಿಪಿಸಿ ಕಾರ್ಯಕ್ರಮದಡಿ ಪ್ರಧಾನಿಯವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ತಜ್ಞರಿಗೆ ಸಂಬಂಧಿಸಿದ ವಿಷಯಗಳಾದ ಶೈಕ್ಷಣಿಕ ಒತ್ತಡ, ಡಿಜಿಟಲ್ ವಿಮುಖತೆ ಮತ್ತು ಸಮಯ ನಿರ್ವಹಣೆಯಂಥ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸಾರವಾಗಿ, ಪರೀಕ್ಷಾ ವ್ಯವಸ್ಥೆ ಒತ್ತಡವಾಗಿ ಪರಿಣಮಿಸದೇ ಸಂಭ್ರಮದ ಕಲಿಕೆ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದ ವ್ಯಾಪಕತೆ ಮತ್ತು ಎಲ್ಲರನ್ನು ತೊಡಗಿಸಿಕೊಳ್ಳುವಲ್ಲಿ, ಸಮಗ್ರ ಶೈಕ್ಷಣಿಕ ನೈತಿಕತೆಯನ್ನು ಬೆಳೆಸುವುದಕ್ಕೆ ಸಂಬಂಧಿಸಿದಂತೆ ಈ ದಾಖಲೆ ಸಾಕ್ಷಿಯಾಗಿದೆ ಎಂದು ಪ್ರಧಾನ್ ಬಣ್ಣಿಸಿದ್ದಾರೆ.







