ಸಂಸತ್ ದಾಳಿ ಪ್ರಕರಣ : ನೀಲಂ ವರ್ಮಾಗೆ ಬೆಂಬಲ ನೀಡಿ ಜಿಂದ್ ನಗರದಲ್ಲಿ ಮೆರವಣಿಗೆ ನಡೆಸಿದ ಖಾಪ್ಗಳು ಮತ್ತು ರೈತ ಸಂಘಗಳು

PHOTO: timesofindia.indiatimes.com
ಜಿಂದ್: ಸಂಸತ್ ಮೇಲಿನ ದಾಳಿಯಲಿ ಬಂಧಿತರಾದ ನೀಲಂ ವರ್ಮಾಗೆ ರೈತ ಸಂಘಗಳು ಮತ್ತು ಕೆಲವು ಖಾಪ್ ಪಂಚಾಯತ್ಗಳು ತಮ್ಮ ಬೆಂಬಲವನ್ನು ನೀಡಿದ ಒಂದು ದಿನದ ನಂತರ, ರೈತರು ಮತ್ತು ಬಂಗಾರ್ ಪ್ರದೇಶದ ಖಾಪ್ಗಳ ಇತರ ಸಂಘಟನೆಗಳು ಬೆಂಬಲ ಸೂಚಿಸಿದ ಘಟನೆ ವರದಿಯಾಗಿದೆ. ಚಹಲ್ ಖಾಪ್, ಕಂಡೇಲ್ ಖಾಪ್, ಸರ್ವ ಜಾತಿಯ ಖಾಪ್ ಮುಖ್ಯಸ್ಥರು, ಭಾರತೀಯ ಕಿಸಾನ್ ಯೂನಿಯನ್ ಮತ್ತು ಸಾಮಾಜಿಕ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಶನಿವಾರ ಜಿಂದ್ ನಗರದಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿದರು ಎಂದು timesofindia ವರದಿ ಮಾಡಿದೆ.
ಪ್ರತಿಭಟನಾಕಾರರು ನೀಲಂ ವರ್ಮಾ ಅವರನ್ನು ಬಿಡುಗಡೆ ಮಾಡುವಂತೆ ಐಎಎಸ್ ಅಧಿಕಾರಿಯಾದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಪಂಕಜ್ ಕುಮಾರ್ಗೆ ಮನವಿ ಸಲ್ಲಿಸಿದರು. ನಗರದಲ್ಲಿ ಡಿಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾಗ ನೀಲಂ ಬೇಟಿ ಕೊ ರಿಹಾ ಕರೋ (ಮಗಳು ನೀಲಂ ಅವರನ್ನು ಬಿಡುಗಡೆ ಮಾಡಿ) ಎಂಬ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ. ಆಕೆಯನ್ನು ಶೀಘ್ರ ಬಿಡುಗಡೆ ಮಾಡದಿದ್ದಲ್ಲಿ ಚಳವಳಿಯನ್ನು ಸಜ್ಜುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಕೆಯು ರಾಜ್ಯಾಧ್ಯಕ್ಷ ಜೈದೀಪ್ ಚಾಹಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನೀಲಂ ಅವರು ಯುವಜನತೆಯ ನಿಜವಾದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಯಾವುದೇ ಬಾಂಬ್ ಬಳಸಿಲ್ಲ. ಅವರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಹೇರುವ ಮೂಲಕ ಅವರನ್ನು ಭಯೋತ್ಪಾದಕರು ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯಗಳು ಅಧಿಕಾರಕ್ಕೆ ಬಂದಾಗಿನಿಂದ ಯುವಕರನ್ನು ಕಡೆಗಣಿಸುತ್ತಿವೆ. ಯುವಕರು ಖಿನ್ನತೆಗೆ ಒಳಗಾಗಿದ್ದಾರೆ. ಈ ರೀತಿಯ ಕ್ರಮಗಳನ್ನು ಕೈಗೊಳ್ಳುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ವಿಫಲವಾಗಿದೆ. ಹರಿಯಾಣದ ಮಗಳು ಅವರ ಚುನಾವಣಾ ಭರವಸೆಯನ್ನು ಅವರಿಗೆ ತಿಳಿಸಲು ಪ್ರಯತ್ನಿಸಿದರು. ಹರಿಯಾಣ ಆಕೆಯನ್ನು ಬೆಂಬಲಿಸುತ್ತದೆ. ಯುಎಪಿಎ ತೆಗೆದುಹಾಕಲು ಮತ್ತು ಆಕೆಯ ಬಿಡುಗಡೆಯನ್ನು ಕೋರಿ ಇಂತಹ ಪ್ರತಿಭಟನೆಗಳನ್ನು ಮುಂದುವರೆಸುತ್ತದೆ ಎಂದು ಅವರು ಹೇಳಿದರು.
ಹರ್ಯಾಣದಲ್ಲಿ ಜಿಂದ್ ಜಿಲ್ಲೆ ನಿರುದ್ಯೋಗದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಏಕೆಂದರೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ 50,000 ಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದಾರೆ. ಹರಿಯಾಣದಲ್ಲಿ 5 ಲಕ್ಷಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿದ್ದಾರೆ. ಅವರು ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದಾರೆ. ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ನಿರುದ್ಯೋಗಿ ಯುವಕರನ್ನು ಭಯೋತ್ಪಾದಕರು ಎಂದು ಸಾಬೀತುಪಡಿಸುವ ಬದಲು ಅವರ ನೈಜ ಸಮಸ್ಯೆಯನ್ನು ನಿಭಾಯಿಸಲು ಕ್ರಮ ತೆಗೆದುಕೊಳ್ಳಬೇಕು.
ಈ ಮಧ್ಯೆ, ಶುಕ್ರವಾರ ರಾತ್ರಿ ಐವರು ತಮ್ಮ ಮನೆಗೆ ಭೇಟಿ ನೀಡಿದ್ದರು, ಅವರು ತಮ್ಮನ್ನು ತನಿಖಾ ಸಂಸ್ಥೆಯ ಅಧಿಕಾರಿಗಳು ಎಂದು ಪರಿಚಯಿಸಿಕೊಂಡರು ಎಂದು ನೀಲಂ ಪೋಷಕರು ಹೇಳಿದ್ದಾರೆ. "ಅವರು ನಮ್ಮ ಮನೆಯಲ್ಲಿ ಹುಡುಕಾಡಿದರು. ಸುಮಾರು 15 ನಿಮಿಷಗಳ ಕಾಲ ಇದ್ದರು. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡ ನಂತರ ಹೊರಟುಹೋದರು" ಎಂದು ನೀಲಂ ವರ್ಮಾ ಅವರ ತಾಯಿ ಶರಾವತಿ ದೇವಿ ಹೇಳಿದರು.







