ಚೆನ್ನೈ ಏರ್ಪೋರ್ಟ್ ನಲ್ಲಿ ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ!

ಸಾಂದರ್ಭಿಕ ಚಿತ್ರ (AI)
ಚೆನ್ನೈ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ಮುಂಜಾನೆ ಟ್ಯಾಕ್ಸಿವೇನಲ್ಲಿ ಚಲಿಸುತ್ತಿದ್ದ ವಿಮಾನದಿಂದ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರ ತೆರೆದು ಹೊರಗೆ ಜಿಗಿದ ಘಟನೆ ನಡೆದಿದೆ.
ಶಾರ್ಜಾದಿಂದ ಚೆನ್ನೈಗೆ ಆಗಮಿಸಿದ್ದ ಏರ್ ಅರೇಬಿಯಾ ವಿಮಾನದಲ್ಲಿ 231 ಪ್ರಯಾಣಿಕರು ಇದ್ದರು. ವಿಮಾನವು ಟ್ಯಾಕ್ಸಿವೇಯಲ್ಲಿ ಚಲಿಸುತ್ತಿದ್ದಾಗ, 34 ವರ್ಷದ ಪ್ರಯಾಣಿಕನೊಬ್ಬ ಏಕಾಏಕಿ ತುರ್ತು ಬಾಗಿಲು ತೆರೆದು ಹೊರಗೆ ಜಿಗಿದರು ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಇತರ ಪ್ರಯಾಣಿಕರಲ್ಲಿ ಆತಂಕ ಉಂಟಾಗಿ, ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ತಾತ್ಕಾಲಿಕ ಅಡಚಣೆ ಉಂಟಾಯಿತು ಎಂದು NDTV ವರದಿ ಮಾಡಿದೆ.
ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಆ ಪ್ರಯಾಣಿಕ, ಹಾರಾಟದ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಶಂಕೆ ವ್ಯಕ್ತಪಡಿಸಿದರು. “ಅವರಿಗೆ ವಾಂತಿಯ ಬರುವಂತಾಗುತ್ತಿತ್ತು ಎಂದು ತಿಳಿಸಿದ್ದಾರೆ. ವಿಮಾನದಲ್ಲಿ ಎರಡು ಬಾರಿ ವಾಂತಿ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ತಕ್ಷಣ ಪೈಲಟ್ ವಿಮಾನವನ್ನು ನಿಲ್ಲಿಸಿ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಳಿಕ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಬಾಂಬ್ ನಿಷ್ಕ್ರಿಯ ದಳ ಹಾಗೂ ಸಶಸ್ತ್ರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಈ ಸಂಬಂಧ ಪೈಲಟ್ ಔಪಚಾರಿಕ ದೂರು ಸಲ್ಲಿಸಿದ್ದು, ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆತನನ್ನು ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.
ಘಟನೆಯ ಪರಿಣಾಮವಾಗಿ ಬೆಳಗಿನ ಜಾವ 03:23ರಿಂದ 04:23ರವರೆಗೆ ಮುಖ್ಯ ರನ್ವೇ ಮುಚ್ಚಲ್ಪಟ್ಟಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಗೆ ಸ್ವಲ್ಪ ಸಮಯ ಅಡಚಣೆ ಉಂಟಾಯಿತು.
ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಹಾಗೂ ವಿಮಾನಕ್ಕೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.






