ಇಂಡಿಗೋ ವಿಮಾನದಲ್ಲಿ ಹಲ್ಲೆಗೊಳಗಾದ ಪ್ರಯಾಣಿಕ ಲ್ಯಾಂಡಿಂಗ್ ಬಳಿಕ ನಾಪತ್ತೆ; ಆತಂಕದಲ್ಲಿ ಕುಟುಂಬ

Screengrab:X/@iamnarendranath
ಮುಂಬೈ: ಮುಂಬೈನಿಂದ ಕೋಲ್ಕತ್ತಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಭಯಗೊಂಡು ವಿಮಾನದಿಂದ ಇಳಿಸುವಂತೆ ಆಗ್ರಹಿಸಿದ ವ್ಯಕ್ತಿಯೋರ್ವೊನಿಗೆ ಸಹಪ್ರಯಾಣಿಕನೋರ್ವ ಕಪಾಳ ಮೋಕ್ಷ ಮಾಡಿರುವ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಹಪ್ರಯಾಣಿಕ ಹಲ್ಲೆ ನಡೆಸುವ ವೀಡಿಯೊ ವೈರಲ್ ಆಗಿದೆ.
ಅಸ್ಸಾಂನ ಉಸೈನ್ ಅಹ್ಮದ್ ಮಝುಂದಾರ್ ಎಂಬವರ ಮೇಲೆ ಸಹಪ್ರಯಾಣಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆ ಬಳಿಕ ಉಸೈನ್ ಅಹ್ಮದ್ ಮಝುಂದಾರ್ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆ ಮಾಡಿದಾತನನ್ನು ಹಫೀಝುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಆತನನ್ನು ಕೋಲ್ಕತ್ತಾದಲ್ಲಿ ಬಂದಿಳಿದ ಕೂಡಲೇ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?:
ಮುಂಬೈನಿಂದ ಕೋಲ್ಕತ್ತಾಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಉಸೈನ್ ಅಹ್ಮದ್ ಮಝುಂದಾರ್ ಪ್ರಯಾಣಿಸುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಉಸೈನ್ ಅಹ್ಮದ್ ಮಝುಂದಾರ್ ತಮ್ಮ ಆಸನದಿಂದ ಹೊರಬರಲು ಪ್ರಯತ್ನಿಸುತ್ತಿರುವುದು, ಇಳಿಸುವಂತೆ ವಿನಂತಿಸುತ್ತಿರುವುದು ಕಾಣಬಹುದು. ವಿಮಾನದ ಸಿಬ್ಬಂದಿ ಅವರಿಗೆ ಸಮಾಧಾನ ಪಡಿಸಲು ಪ್ರಯತ್ನಿಸುತ್ತಿರುವುದು, ಮತ್ತೋರ್ವ ಪ್ರಯಾಣಿಕ ಇದ್ದಕ್ಕಿದ್ದಂತೆ ಅವರಿಗೆ ಕಪಾಳಮೋಕ್ಷ ಮಾಡುವುದು ಕಂಡು ಬಂದಿದೆ.
ಮುಂಬೈ ಮೂಲದ ಜಿಮ್ ತರಬೇತುದಾರನಾಗಿದ್ದ ಉಸೈನ್ ಅಹ್ಮದ್ ಮಝುಂದಾರ್ ತಮ್ಮ ಊರಾದ ಕಚಾರ್ ಜಿಲ್ಲೆಯ ಕಟಿಗೋರಾಗೆ ಹೋಗುತ್ತಿದ್ದರು. ಅವರು ಕೊಲ್ಕತಾದಿಂದ ಶಿಲ್ಚರ್ಗೆ ವಿಮಾನದಲ್ಲಿ ತೆರಳಬೇಕಿತ್ತು. ಆದರೆ, ಅವರು ಶಿಲ್ಚರ್ಗೆ ತೆರಳುವ ವಿಮಾನಕ್ಕೆ ಹತ್ತಲಿಲ್ಲ ಮತ್ತು ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ʼಉಸೈನ್ ಅಹ್ಮದ್ ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ. ನಾವು ಪೊಲೀಸರು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಆದರೆ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲʼ ಎಂದು ಉಸೈನ್ ಸಂಬಂಧಿಯಾಗಿರುವ ಝುಬೈರುಲ್ ಇಸ್ಲಾಂ ಮಝುಂದಾರ್ ಹೇಳಿದ್ದಾರೆ.
ʼಅವರು ನಮ್ಮ ಏಕೈಕ ಭರವಸೆಯಾಗಿದ್ದರು. ಈಗ ಅವರು ಸುರಕ್ಷಿತವಾಗಿದ್ದಾರೆಯೇ ಎಂದು ನಮಗೆ ತಿಳಿದಿಲ್ಲʼ ಎಂದು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಅವರ ತಂದೆ ಅಬ್ದುಲ್ ಮನ್ನನ್ ಮಝುಂದಾರ್ ಕಣ್ಣೀರಿಡುತ್ತಾ ಹೇಳಿದರು.
ಇಂಡಿಗೋ ಏರ್ಲೈನ್ಸ್ ಪ್ರತಿಕ್ರಿಯೆ ಏನು?
ʼನಮ್ಮ ವಿಮಾನವೊಂದರಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಅಂತಹ ಅಶಿಸ್ತಿನ ನಡವಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತರುವ ಯಾವುದೇ ನಡೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಿಬ್ಬಂದಿ ಸ್ಥಾಪಿತ ಕಾರ್ಯವಿಧಾನಗಳಿಗೆ ಅನುಸಾರವಾಗಿ ವರ್ತಿಸಿದರು. ಶಿಸ್ತು ಉಲ್ಲಂಘಿಸಿದ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಶಿಷ್ಟಾಚಾರದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆʼ ಎಂದು ಆಗಸ್ಟ್ 1ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಇಂಡಿಗೋ ಏರ್ಲೈನ್ಸ್ ಹೇಳಿದೆ.
ಆದರೆ, ಘಟನೆಯ ನಂತರ ಉಸೇನ್ಗೆ ಏನಾಯಿತು? ಅವರಿಗೆ ವೈದ್ಯಕೀಯ ನೆರವು ಸಿಕ್ಕಿದೆಯೇ? ಅವರನ್ನು ಬಂಧಿಸಲಾಗಿದೆಯೇ ಅಥವಾ ಅವರ ಪ್ರಯಾಣವನ್ನು ಮುಂದುವರಿಸಲು ಅನುಮತಿಸಲಾಗಿದೆಯೇ ಎಂಬುದನ್ನು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿಲ್ಲ. ಇದರಿಂದಾಗಿ ವಿಮಾನಯಾನ ಸಂಸ್ಥೆಯ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಕಪಾಳಮೋಕ್ಷದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಇದು ದ್ವೇಷದ ಕೃತ್ಯ ಎಂದು ಟೀಕಿಸಿದರು.
ʼದಿ ಹಿಂದೂʼ ಪತ್ರಿಕೆಯ ಪತ್ರಕರ್ತೆ ಜಾಗೃತಿ ಚಂದ್ರ ಅವರು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ʼಇಂಡಿಗೋ ವಿಮಾನದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಸಹಪ್ರಯಾಣಿಕನನ್ನು ಅಶಿಸ್ತಿನ ವರ್ತನೆಗಾಗಿ ಕಾನೂನು ಜಾರಿ ಸಂಸ್ಥೆಗಳಿಗೆ ಒಪ್ಪಿಸಲಾಗಿದೆ. ಓರ್ವ ಪ್ರಯಾಣಿಕ ವಿಮಾನದಲ್ಲಿ ಅನಾನುಕೂಲತೆ ಅನುಭವಿಸಿ ಇಳಿಯಲು ಬಯಸಿದ ನಂತರ ಈ ಘಟನೆ ನಡೆದಿದೆ. ಇಬ್ಬರೂ ಒಂದೇ ಧರ್ಮಕ್ಕೆ ಸೇರಿದವರುʼ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಕೆಲ ಪೋಸ್ಟ್ಗಳು ಉಸೇನ್ ನಂತರ ಪತ್ತೆಯಾಗಿದ್ದಾರೆ ಎಂದು ಹೇಳುತ್ತಿವೆ. ಆದರೆ, ಅಧಿಕಾರಿಗಳು ಅಥವಾ ವಿಮಾನಯಾನ ಸಂಸ್ಥೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.







