Patanjali foods ಮೆಣಸಿನ ಹುಡಿಯ ಸ್ಯಾಂಪಲ್ ಡೇಂಜರ್: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.12: ಯೋಗ ಗುರು ರಾಮದೇವ್ ಅವರ ಉತ್ತರಾಖಂಡ ಮೂಲದ ಪತಂಜಲಿ ಫುಡ್ಸ್ ತಯಾರಿಸಿರುವ ಮೆಣಸಿನ ಹುಡಿಯ ಸ್ಯಾಂಪಲ್ನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಕೇಂದ್ರವು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ.
2024-25ರಲ್ಲಿ ಮಸಾಲೆಗಳ ಸ್ಯಾಂಪಲ್ ಗಳನ್ನು ತಪಾಸಣೆಗೊಳಪಡಿಸಿದ ಸಂದರ್ಭ ಪತಂಜಲಿ ಫುಡ್ಸ್ ನಿಂದ ಸಂಗ್ರಹಿಸಲಾಗಿದ್ದ ಮೆಣಸಿನ ಹುಡಿಯ ಸ್ಯಾಂಪಲ್ನಲ್ಲಿ ಕೀಟನಾಶಕ ಅವಶೇಷ ಮಟ್ಟವು ಅನುಮತಿಸಲಾದ ಮಿತಿಗಿಂತ ಹೆಚ್ಚಿರುವುದು ಪತ್ತೆಯಾಗಿದ್ದು,ಅದನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ ಎಂದು ಸಹಾಯಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರತಾಪರಾವ್ ಜಾಧವ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.
ಪರೀಕ್ಷಾ ಫಲಿತಾಂಶಗಳ ಆಧಾರದಲ್ಲಿ ಸಂಬಂಧಿತ ಪ್ರಾಧಿಕಾರದ ಆದೇಶದ ಮೇರೆಗೆ ಪತಂಜಲಿ ಅಸುರಕ್ಷಿತ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳುತ್ತಿದೆ ಎಂದರು.
ಅಮುಲ್ ಬ್ರ್ಯಾಂಡ್ನ ಉತ್ಪಾದನೆಗಳ ಯಾವುದೇ ಸ್ಯಾಂಪಲ್ಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳಡಿ ಅಸುರಕ್ಷಿತವಾಗಿರುವುದು ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು.
ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಗುಣಮಟ್ಟ ಪರೀಕ್ಷಿತ ಮತ್ತು ಸುರಕ್ಷಿತ ಆಹಾರ ಉತ್ಪನ್ನಗಳು ಮಾತ್ರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನವ ಬಳಕೆಗೆ ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಲು ಆಹಾರ ಉತ್ಪನ್ನಗಳಿಗೆ ವಿಜ್ಞಾನ ಆಧಾರಿತ ಗುಣಮಟ್ಟವನ್ನು ನಿಗದಿಗೊಳಿಸುವಂತೆ ಹಾಗೂ ಅವುಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಆಮದನ್ನು ನಿಯಂತ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಆದೇಶಿಸಲಾಗಿದೆ ಎಂದು ತಿಳಿಸಿದರು.
2006ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಕಾಯ್ದೆಯ ಅನುಷ್ಠಾನವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೊಣೆಗಾರಿಕೆಯಾಗಿದೆ.
2006ರ ಎಫ್ಎಸ್ಎಸ್ ಕಾಯ್ದೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳ ಅಡಿ ನಿಗದಿತ ಮಾನದಂಡಗಳು,ಮಿತಿಗಳು ಮತ್ತು ಇತರ ಶಾಸನಬದ್ಧ ಅಗತ್ಯಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಫ್ಎಸ್ಎಸ್ಎಐ ಮತ್ತು ಅದರ ಪ್ರಾದೇಶಿಕ ಕಚೇರಿಗಳು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಪ್ರಾಧಿಕಾರಗಳ ಮೂಲಕ ವರ್ಷವಿಡೀ ನಿಯಮಿತವಾಗಿ ತಪಾಸಣೆ ಮತ್ತು ಕಣ್ಗಾವಲು ಅಭಿಯಾನಗಳನ್ನು ನಡೆಸುತ್ತವೆ ಎಂದು ಜಾಧವ ತಿಳಿಸಿದರು.
ಎಫ್ಎಸ್ಎಸ್ಆರ್ ಉಲ್ಲಂಘನೆಗಳು ಕಂಡುಬಂದರೆ ತಯಾರಕರ ವಿರುದ್ಧ 2006ರ ಕಾಯ್ದೆ ಮತ್ತು ಸಂಬಂಧಿತ ನಿಯಮಗಳಡಿ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದರು.







