ಮುರುಗನ್ ಸಮ್ಮೇಳನದಲ್ಲಿ ಮದ್ರಾಸ್ ಹೈಕೋರ್ಟ್ ಷರತ್ತುಗಳ ಉಲ್ಲಂಘನೆ: ಪವನ್ ಕಲ್ಯಾಣ್, ಅಣ್ಣಾಮಲೈ ಹಾಗೂ ಸಂಘಟಕರ ವಿರುದ್ಧ ಪ್ರಕರಣ ದಾಖಲು
ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಭಾಷಣ ಮಾಡದಂತೆ ಸೂಚಿಸಿದ್ದ ನ್ಯಾಯಾಲಯ

ಅಣ್ಣಾಮಲೈ, ಪವನ್ ಕಲ್ಯಾಣ್ (Photo: PTI)
ಮಧುರೈ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಭಾವನೆ ಕೆರಳಿಸುವಂತಹ ಭಾಷಣಗಳನ್ನು ಮಾಡಕೂಡದು ಎಂಬ ಮದ್ರಾಸ್ ಹೈಕೋರ್ಟ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ, ಸೋಮವಾರ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಘಟಕದ ಮಾಜಿ ಮುಖ್ಯಸ್ಥ ಕೆ.ಅಣ್ಣಾಮಲೈ ಹಾಗೂ ಜೂನ್ 22ರಂದು ಶ್ರೀ ಮುರುಗನ್ ಭಕ್ತಾದಿಗಳ ವಿಚಾರಗೋಷ್ಠಿಯನ್ನು ಆಯೋಜಿಸಿದ್ದ ಪ್ರಮುಖ ಸಂಘಟಕರು ಸೇರಿದಂತೆ ಹಲವರ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿದೆ ಎಂದು indianexpress.com ವರದಿ ಮಾಡಿದೆ.
ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಮತ್ತು ಧಾರ್ಮಿಕ ಭಾಷಣಗಳನ್ನು ಮಾಡಕೂಡದು ಎಂಬ ಮದ್ರಾಸ್ ಹೈಕೋರ್ಟ್ ನ ನಿರ್ಬಂಧಗಳನ್ನು ಉಲ್ಲಂಘಿಸಲಾಗಿದೆ ಎಂಬ ಅರೋಪ ಸಂಬಂಧ E3 ಅಣ್ಣಾನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಧುರೈ ಪೀಪಲ್ಸ್ ಫೆಡರೇಷನ್ ಫಾರ್ ಕಮ್ಯೂನಲ್ ಹಾರ್ಮೊನಿ ಸಂಘಟನೆಯ ಸಮನ್ವಯಕಾರ ಹಾಗೂ ವಕೀಲ ಎಸ್.ವಂಜಿನಾಥನ್ ಎಂಬವರು ದಾಖಲಿಸಿರುವ ದೂರನ್ನು ಆಧರಿಸಿ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು ಹಾಗೂ ತೆಗೆದುಕೊಳ್ಳಲಾದ ನಿರ್ಣಯಗಳು ಕೋಮು ವೈಷಮ್ಯಕ್ಕೆ ಪ್ರಚೋದನೆ ನೀಡಿದ್ದು, ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಮದ್ರಾಸ್ ಹೈಕೋರ್ಟ್ ವಿಧಿಸಿದ್ದ ಕಟ್ಟುನಿಟ್ಟಿನ ರಾಜಕೀಯ ಮತ್ತು ಧಾರ್ಮಿಕ ಸಂದೇಶಗಳ ಮೇಲಿನ ನಿರ್ಬಂಧಗಳನ್ನು ಉಲ್ಲಂಘಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಹಿಂದೂ ಮುನ್ನನಿ ಸಂಘಟನೆಯ ಅಧ್ಯಕ್ಷ ಕದೇಶ್ವರ ಸುಬ್ರಮಣಿಯನ್, ಅದರ ರಾಜ್ಯ ಕಾರ್ಯದರ್ಶಿ ಎಸ್.ಮುತ್ತುಕುಮಾರ್, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಹಾಗೂ ಆರ್ಎಸ್ಎಸ್, ಬಿಜೆಪಿ, ಹಿಂದೂ ಮುನ್ನನಿ ಹಾಗೂ ಸಂಘ ಪರಿವಾರದ ಅಂಗ ಸಂಸ್ಥೆಗಳ ಹಲವು ಅಪರಿಚಿತ ಸಂಘಟನಾ ಸದಸ್ಯರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.







