ಐದು ತಿಂಗಳಲ್ಲಿ ಮತದಾರರ ಪಟ್ಟಿಗೆ 41 ಲಕ್ಷ ಹೊಸ ಮತದಾರರ ಸೇರ್ಪಡೆ ಹೇಗೆ ಸಾಧ್ಯ? : ಪವನ್ ಖೇರಾ ಪ್ರಶ್ನೆ
ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿಯ ಆರೋಪವನ್ನು ಬೆಂಬಲಿಸಿದ ಕಾಂಗ್ರೆಸ್ ನಾಯಕ

ಹೊಸದಿಲ್ಲಿ : ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಹುಲ್ ಗಾಂಧಿಯ ಆರೋಪವನ್ನು ಬೆಂಬಲಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, 2024ರ ವಿಧಾನಸಭಾ ಚುನಾವಣೆಗೆ ಮೊದಲ ಐದು ತಿಂಗಳಲ್ಲಿ ಮತದಾರರ ಪಟ್ಟಿಗೆ 41ಲಕ್ಷ ಹೊಸ ಮತದಾರರ ಸೇರ್ಪಡೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಪ್ರಶ್ನೆಗಳು ಬಹಳ ಸ್ಪಷ್ಟವಾಗಿವೆ. 2019ರಿಂದ 2024ರವರೆಗಿನ ಐದು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಗೆ 31 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಆದರೆ, ಐದು ತಿಂಗಳಲ್ಲಿ 41 ಲಕ್ಷ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಹೇಗೆ ಸಾಧ್ಯ ಎಂದು ಖೇರಾ ಪ್ರಶ್ನಿಸಿದರು.
ಸಂಜೆ 5 ಗಂಟೆಯ ನಂತರ ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಅಂಕಿ-ಅಂಶಗಳಲ್ಲಿ ತೀವ್ರ ಹೆಚ್ಚಳದ ಬಗ್ಗೆ ಪ್ರಶ್ನಿಸಿದ್ದಾರೆ. ಸಂಜೆ 5 ಗಂಟೆಗೆ ವೇಳೆಗೆ ಶೇ. 58.22ರಷ್ಟು ಮತದಾನವಾಗಿರುವ ಬಗ್ಗೆ ಅಂಕಿ-ಅಂಶವನ್ನು ನೀಡಲಾಗಿದೆ. ಅಂತಿಮ ಮತದಾನ ಶೇ.66ರಷ್ಟಿದೆ. ಕೊನೆಯ ಅವಧಿಗೆ ಶೇ. 8ರಷ್ಟು ಹೆಚ್ಚಳ ಹೇಗೆ ಸಾಧ್ಯ? ಅವರು ನಮಗೆ ವಿಡಿಯೋಗ್ರಫಿ ಒದಗಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಅದೇ 12,000 ಬೂತ್‌ಗಳಿಂದ ಹೊಸ ಮತದಾರರು ಹೇಗೆ ಸೇರ್ಪಡೆಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಏಕೆ ಹೊರಗಿಡಲಾಯಿತು ಎಂದು ಅವರು ಇದೇ ವೇಳೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.







