‘ನಿರ್ದಿಷ್ಟ ವಿಷಯ’ದ ಕುರಿತ ಭಿನ್ನಾಭಿಪ್ರಾಯದಿಂದ ಸೋನಿಯಾ ಗಾಂಧಿ ಆತ್ಮಚರಿತ್ರೆ ಪ್ರಕಟಣೆ ಸ್ಥಗಿತ: ಪೆಂಗ್ವಿನ್ ಇಂಡಿಯಾ
ಸರಕಾರದ ಒತ್ತಡದ ಆರೋಪ ತಳ್ಳಿಹಾಕಿದ ಪ್ರಕಾಶನ ಸಂಸ್ಥೆ

Photo credit | PTI/ X
ಹೊಸದಿಲ್ಲಿ: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯನ್ನು ಭಾರತದಲ್ಲಿ ಪ್ರಕಟಿಸುವ ವಿಚಾರದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ಮತ್ತು ಲೇಖಕರ ತಂಡದ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಒಮ್ಮತ ಮೂಡಲಿಲ್ಲ. ಇದರಿಂದ ಪುಸ್ತಕದ ಪ್ರಕಟಣೆ ಮುಂದುವರಿಯಲಿಲ್ಲ ಎಂದು ಪೆಂಗ್ವಿನ್ ಇಂಡಿಯಾ ಸ್ಪಷ್ಟಪಡಿಸಿದೆ.
ಪುಸ್ತಕವನ್ನು ಪ್ರಕಟಿಸದಿರುವ ತನ್ನ ನಿರ್ಧಾರದ ಹಿಂದೆ ಯಾವುದೇ ಸರಕಾರದ ಅಥವಾ ಹೊರಗಿನ ಒತ್ತಡವಿಲ್ಲ ಎಂದೂ ಸಂಸ್ಥೆ ಹೇಳಿದೆ. ಆದರೆ, ಯಾವ ವಿಷಯದ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಲೇಖಕರೊಂದಿಗಿನ ಒಪ್ಪಂದ ಮತ್ತು ಗೌಪ್ಯತೆಯ ನಿಯಮಗಳಿಗೆ ತಾನು ಬದ್ಧವಾಗಿರುವುದಾಗಿ ತಿಳಿಸಿದೆ.
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಅನ್ನು ಅಮೆರಿಕದ ಆಲ್ಫ್ರೆಡ್ ಎ. ನಾಫ್ ಪ್ರಕಾಶನ ಸಂಸ್ಥೆ ನವೆಂಬರ್ 10ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧವಾಗಿದೆ. ಆದರೆ, ಭಾರತದಲ್ಲಿ ಪುಸ್ತಕ ಪ್ರಕಟಿಸಬೇಕಿದ್ದ ಪೆಂಗ್ವಿನ್ ಇಂಡಿಯಾ ಅದರಿಂದ ಹಿಂದೆ ಸರಿದಿದೆ.
ಪುಸ್ತಕದ ಪ್ರಕಟಣೆ ನಿಲ್ಲಲು ಸರಕಾರದ ಒತ್ತಡ ಕಾರಣ ಎಂದು ಕಾಂಗ್ರೆಸ್ ನ ಹಲವು ನಾಯಕರು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ, RSS ಮತ್ತು ಚೀನಾದಿಂದ ಭಾರತೀಯ ಭೂಪ್ರದೇಶದ ಅತಿಕ್ರಮಣಕ್ಕೆ ಸಂಬಂಧಿಸಿದ ಭಾಗಗಳನ್ನು ಪುಸ್ತಕದಿಂದ ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಲಾಗಿತ್ತು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ಈ ಬೆಳವಣಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಕಳವಳಕ್ಕೆ ಕಾರಣವಾಗಿತ್ತು.
ಈ ಆರೋಪವನ್ನು ಪೆಂಗ್ವಿನ್ ಇಂಡಿಯಾ ಸ್ಪಷ್ಟವಾಗಿ ತಳ್ಳಿಹಾಕಿದೆ.
“‘ಬಿಲಾಂಗಿಂಗ್’ ಪುಸ್ತಕವನ್ನು ಪ್ರಕಟಿಸಲು ನಾವು ನಿಜವಾಗಿಯೂ ಉತ್ಸುಕರಾಗಿದ್ದೆವು. ಇದು ನಾವು ಕಷ್ಟಪಟ್ಟು ಸಂಪಾದಿಸಿಕೊಂಡ ಹಕ್ಕುಗಳ ಪುಸ್ತಕ” ಎಂದು PRHI ವಕ್ತಾರ ಪಲ್ಲವಿ ನಾರಾಯಣ್ ಅವರು ಪಿಟಿಐಗೆ ನೀಡಿದ ವಿಶೇಷ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಪುಸ್ತಕದ ವಿಷಯ ಗೌಪ್ಯವಾಗಿದೆ. ನಾವು ಲೇಖಕರೊಂದಿಗಿನ ಒಪ್ಪಂದಕ್ಕೆ ಬದ್ಧರಾಗಿದ್ದೇವೆ. ಯಾವುದೇ ಬಾಹ್ಯ ಒತ್ತಡ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಹಸ್ತಪ್ರತಿಯಲ್ಲಿ ಹಲವು ಬದಲಾವಣೆ
ಪುಸ್ತಕದ ಹಸ್ತಪ್ರತಿಯನ್ನು ಪೆಂಗ್ವಿನ್ ಇಂಡಿಯಾ ತನ್ನ ಸಾಮಾನ್ಯ ಸಂಪಾದಕೀಯ ಪ್ರಕ್ರಿಯೆಯಂತೆ ಪರಿಶೀಲಿಸಿತ್ತು. ಈ ವೇಳೆ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿತ್ತು. ಅವುಗಳ ಬಗ್ಗೆ ಲೇಖಕರ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿತ್ತು.
“ಕೆಲವು ವಿಷಯಗಳಲ್ಲಿ ಲೇಖಕರ ತಂಡ ಬದಲಾವಣೆಗಳಿಗೆ ಒಪ್ಪಿಕೊಂಡಿತು. ಇನ್ನು ಕೆಲವು ವಿಷಯಗಳಲ್ಲಿ ನಾವು ಲೇಖಕರ ನಿಲುವನ್ನು ಒಪ್ಪಿಕೊಂಡೆವು. ಆದರೆ, ಅಂತಿಮವಾಗಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ” ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.
ಆ ಬಳಿಕ ಪುಸ್ತಕದ ಪ್ರಕಟಣೆಯೊಂದಿಗೆ ಮುಂದುವರಿಯಲು ತಮಗೆ ಆಸಕ್ತಿ ಇಲ್ಲ ಎಂದು ಲೇಖಕರ ತಂಡ ಪೆಂಗ್ವಿನ್ ಇಂಡಿಯಾಗೆ ತಿಳಿಸಿತು. ಈ ನಿರ್ಧಾರವನ್ನು ಗೌರವಿಸುವುದಾಗಿ ಸಂಸ್ಥೆ ಹೇಳಿದೆ.
ಯಾವ ವಿಷಯದ ಬಗ್ಗೆ ಒಮ್ಮತ ಮೂಡಲಿಲ್ಲ ಎಂಬುದನ್ನು ಪೆಂಗ್ವಿನ್ ಇಂಡಿಯಾ ಬಹಿರಂಗಪಡಿಸಿಲ್ಲ. ಒಪ್ಪಂದದ ನಿಯಮಗಳು ಮತ್ತು ಲೇಖಕರ ಗೌಪ್ಯತೆಯನ್ನು ಗೌರವಿಸಬೇಕಿರುವುದರಿಂದ ಆ ವಿವರವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಹಸ್ತಪ್ರತಿಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು, ಪ್ರಶ್ನೆಗಳನ್ನು ಕೇಳುವುದು, ಬದಲಾವಣೆಗಳನ್ನು ಶಿಫಾರಸು ಮಾಡುವುದು ಮತ್ತು ಸ್ವತಂತ್ರ ಸಂಪಾದಕೀಯ ನಿರ್ಧಾರ ಕೈಗೊಳ್ಳುವುದು ಪ್ರಕಾಶಕರ ಜವಾಬ್ದಾರಿ ಎಂದು PRHI ತಿಳಿಸಿದೆ. ‘ಬಿಲಾಂಗಿಂಗ್’ ಪುಸ್ತಕಕ್ಕೂ ಇದೇ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಹೇಳಿದೆ.
ಸತ್ಯ ಪರಿಶೀಲನೆ ಮತ್ತು ಸಂಪಾದಕೀಯ ಶಿಫಾರಸುಗಳು ತನ್ನ ಸಾಮಾನ್ಯ ಪ್ರಕಟಣಾ ಪ್ರಕ್ರಿಯೆಯ ಭಾಗವಾಗಿವೆ. ಪುಸ್ತಕವನ್ನು ಪ್ರಕಟಿಸಲು ತಾನು ಇಚ್ಛಿಸಿತ್ತು ಎಂಬ ಹಿಂದಿನ ನಿಲುವಿನಲ್ಲೇ ಸಂಸ್ಥೆ ಈಗಲೂ ಇದೆ ಎಂದು ಹೇಳಿದೆ.
ರಾಜಕೀಯ ವಲಯದಲ್ಲಿ ವಿವಾದ
ಸಂಪಾದಕೀಯ ಬದಲಾವಣೆಗಳ ಕುರಿತು ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಪೆಂಗ್ವಿನ್ ಇಂಡಿಯಾ ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿದಿದೆ ಎಂಬ ವರದಿಗಳ ಬಳಿಕ ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದ ತೀವ್ರಗೊಂಡಿತ್ತು.
ಪ್ರಕಾಶನ ಸಂಸ್ಥೆಯು ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ವಿರೋಧ ಪಕ್ಷದ ನಾಯಕರ ಟೀಕೆಗೆ ಗುರಿಯಾಗಿತ್ತು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಕೂಡ ಪೆಂಗ್ವಿನ್ ಇಂಡಿಯಾದ ನಿರ್ಧಾರ ಬೇರೆಡೆಯಿಂದ ಬಂದ ಒತ್ತಡದಿಂದ ಪ್ರಭಾವಿತವಾಗಿದೆಯೇ ಎಂದು ಪ್ರಶ್ನಿಸಿದ್ದರು.
ಏನಿದೆ ಆತ್ಮಚರಿತ್ರೆಯಲ್ಲಿ?
ಯುದ್ಧಾನಂತರದ ಇಟಲಿಯಲ್ಲಿನ ತಮ್ಮ ಬಾಲ್ಯ, ನೆಹರು–ಗಾಂಧಿ ಕುಟುಂಬದೊಂದಿಗಿನ ವಿವಾಹ, ಪತಿ ರಾಜೀವ್ ಗಾಂಧಿ ಅವರ ಹತ್ಯೆ ಮತ್ತು ನಂತರದ ರಾಜಕೀಯ ಪ್ರವೇಶದ ಕುರಿತು ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಅಂತರರಾಷ್ಟ್ರೀಯ ಬಿಡುಗಡೆಗೂ ಮುನ್ನವೇ ಪುಸ್ತಕ ಸಾಕಷ್ಟು ಆಸಕ್ತಿ ಮೂಡಿಸಿದೆ. ಅಮೆರಿಕದ ಆಲ್ಫ್ರೆಡ್ ಎ. ನಾಫ್ ಸಂಸ್ಥೆ ನವೆಂಬರ್ 10ರಂದು ಪುಸ್ತಕವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧವಾಗಿದೆ.






