ಪೌರತ್ವಕ್ಕೂ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಆರೋಪ : ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ

ಸೋನಿಯಾ ಗಾಂಧಿ (Photo: PTI)
ಹೊಸದಿಲ್ಲಿ: ಭಾರತದ ಪೌರತ್ವ ಪಡೆಯುವ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರನ್ನು ನಮೂದಿಸಲಾಗಿದೆ ಎಂಬ ಆರೋಪದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ದಿಲ್ಲಿಯ ರೂಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಈ ಕುರಿತ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ದೂರುದಾರ ವಿಕಾಸ್ ತ್ರಿಪಾಠಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪವನ್ ನಾರಂಗ್, 1980ರ ಜನವರಿಯಲ್ಲಿ ಸೋನಿಯಾ ಗಾಂಧಿ ಭಾರತೀಯ ನಾಗರಿಕರಲ್ಲದಿದ್ದಾಗ ದಿಲ್ಲಿ ಕ್ಷೇತ್ರದಲ್ಲಿ ಅವರ ಹೆಸರನ್ನು ಮತದಾರರಾಗಿ ಸೇರಿಸಲಾಗಿದೆ ಎಂದು ವಾದಿಸಿದರು.
"ಅವರು ನಾಗರಿಕರಾಗಿದ್ದರೆ, 1982ರಲ್ಲಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಏಕೆ ಅಳಿಸಲಾಯಿತು? ಆಗ ಚುನಾವಣಾ ಆಯೋಗ ಎರಡು ಹೆಸರುಗಳನ್ನು ಅಳಿಸಿಹಾಕಿತು. ಒಂದು ವಿಮಾನ ಅಪಘಾತದಲ್ಲಿ ನಿಧನರಾದ ಸಂಜಯ್ ಗಾಂಧಿಯವರ ಹೆಸರು ಮತ್ತು ಇನ್ನೊಂದು ಸೋನಿಯಾ ಗಾಂಧಿಯವರ ಹೆಸರು" ಎಂದು ಅವರು ವಾದಿಸಿದರು.
ಅರ್ಜಿದಾರರ ಪ್ರಕಾರ, ಚುನಾವಣಾ ಆಯೋಗ ಏನೋ ತಪ್ಪನ್ನು ಕಂಡುಕೊಂಡಿರಬೇಕು. ಅದರಿಂದಾಗಿ ಸೋನಿಯಾ ಗಾಂಧಿ ಹೆಸರನ್ನು ಅಳಿಸಲಾಗಿದೆ. ಅವರ ಹೆಸರನ್ನು 1980ರಲ್ಲಿ ದಿಲ್ಲಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಯಿತು. ನಂತರ 1982ರಲ್ಲಿ ಹೆಸರನ್ನು ಅಳಿಸಲಾಯಿತು. 1983ರಲ್ಲಿ ಅವರು ಭಾರತದ ಪೌರತ್ವ ಪಡೆದ ನಂತರ ಮರು ನಮೂದಿಸಲಾಯಿತು ಎಂದು ವಾದಿಸಿದರು.







