ರೈಲು ಟಿಕೆಟ್ ನಲ್ಲಿ ಆಪರೇಷನ್ ಸಿಂಧೂರ ಯೋಧರಿಗೆ ಪ್ರಧಾನಿ ಮೋದಿ ಸೆಲ್ಯೂಟ್ ನೀಡುವ ಫೋಟೊ !

PC: X/ UmangSinghar
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಸೆಲ್ಯೂಟ್ ನೀಡಿ ಗೌರವ ಸಲ್ಲಿಸುವ ಫೋಟೊವನ್ನು ಯೋಧರ ಶೌರ್ಯಕ್ಕೆ ಗೌರವ ಸಲ್ಲಿಸುವ ಪ್ರತೀಕವಾಗಿ ರೈಲು ಟಿಕೆಟ್ ಗಳಲ್ಲಿ ಮುದ್ರಿಸಲಾಗುವುದು ಎಂದು ರೈಲ್ವೆ ಸಚಿವಾಲಯ ಸೋಮವಾರ ಪ್ರಕಟಿಸಿದೆ.
ಪ್ರಧಾನಿ ಮೋದಿ ಫೋಟೊವನ್ನು ಟಿಕೆಟ್ ಗಳಲ್ಲಿ ಬಳಸುವ ಜತೆಗೆ ಎಲ್ಲ ವಿಭಾಗಗಳು ಮತ್ತು ವಲಯಗಳು ರೈಲು ನಿಲ್ದಾಣಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಆಪರೇಷನ್ ಸಿಂಧೂರ ವಿಜಯವನ್ನು ಸಂಭ್ರಮಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
"ಗೌರವಾನ್ವಿತ ಪ್ರಧಾನಿಯವರು ಆಪರೇಷನ್ ಸಿಂಧೂರ ಹೀರೊಗಳಿಗೆ ಸೆಲ್ಯೂಟ್ ನೀಡುವ ಜತೆಗೆ ಅದರ ಯಶಸ್ಸನ್ನು ಸಂಭ್ರಮಿಸಿದ್ದಾರೆ" ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ದಿಲೀಪ್ ಕುಮಾರ್ ಹೇಳಿದ್ದಾರೆ.
ದೇಶದ ಪ್ರಮುಖ ರೈಲು ನಿಲ್ದಾಣಗಳನ್ನು ತ್ರಿವರ್ಣದಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಹಲವು ವಿಭಾಗಗಳಲ್ಲಿ ಶಾಲಾ ಮಕ್ಕಳಿಗೆ ಆಪರೇಷನ್ ಸಿಂಧೂರ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ನಮ್ಮ ಯೋಧರು ತೋರಿದ ಸಾಹಸ ಕುರಿತ ವಿಡಿಯೊ ತುಣುಕುಗಳನ್ನು ರೈಲು ನಿಲ್ದಾಣಗಳ ಪ್ರದರ್ಶನ ವ್ಯವಸ್ಥೆಯಲ್ಲಿ ಬಿಂಬಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಮ್ಮು, ಪಠಾಣ್ ಕೋಟ್, ಹೊಸದಿಲ್ಲಿ ಮತ್ತು ಶ್ರೀನಗರ ರೈಲು ನಿಲ್ದಾಣಗಳ ಕಾಂಕ್ರೀಟ್ ಬೆಂಚ್ ಗಳಿಗೆ ವಿಶೇಷವಾಗಿ ಬಣ್ಣ ಬಳಿಯಲಾಗಿದ್ದು, ಸಶಸ್ತ್ರ ಪಡೆಗಳ ಚಿತ್ರವನ್ನು ರಚಿಸಲಾಗಿದೆ. ಆಪರೇಷನ್ ಸಿಂಧೂರ ಯಶಸ್ಸನ್ನು ಸಂಭ್ರಮಿಸಲು ಕೆಲ ಡಿವಿಷನ್ ಗಳು ರೈಲು ನಿಲ್ದಾಣಗಳನ್ನು ಸಿಂಧೂರ ಬಣ್ಣದಿಂದ ಅಲಂಕರಿಸಲಾಗಿದೆ ಎಂದು ಜಮ್ಮು ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲ ನಿಲ್ದಾಣಗಳಲ್ಲಿ ರಕ್ಷಣಾ ಸಿಬ್ಬಂದಿಗೆ ವಿಶೇಷ ಆಸನಗಳನ್ನೂ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ.