FACT CHECK | ‘ಲವ್ ಜಿಹಾದ್’ ಕಟ್ಟುಕತೆಗೆ ಬಾಂಗ್ಲಾದೇಶಿ ಸಿನಿಮಾದ ಫೋಟೊಗಳ ಹಂಚಿಕೆ

Photo Credit : altnews.in
ಹೊಸದಿಲ್ಲಿ: ಇತ್ತೀಚೆಗೆ ಸುಟ್ಟು ಗಾಯಕ್ಕೀಡಾಗಿರುವ ಮಹಿಳೆಯೊಬ್ಬರ ಭಾವಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಭಾವಚಿತ್ರದ ಪಕ್ಕ ದಂಪತಿಗಳದ್ದೆನ್ನಲಾದ ಭಾವಚಿತ್ರವನ್ನೂ ಹಂಚಿಕೊಳ್ಳಲಾಗಿದೆ. ಈ ಭಾವಚಿತ್ರವು ಹಿಂದೂ ಮಹಿಳೆಯೊಬ್ಬರ ಮೇಲೆ ಆತನ ಮುಸ್ಲಿಂ ಸಂಗಾತಿ ನಡೆಸಿರುವ ದಾಳಿಯಾಗಿದ್ದು, ಈ ಸಂಬಂಧವು ‘ಲವ್ ಜಿಹಾದ್’ ಪ್ರಕರಣವಾಗಿದೆ ಎಂದು ಆರೋಪಿಸಲಾಗಿದೆ.
ಭಾರತ್ ರಾಷ್ಟ್ರಸೇನಾ (@bharatrashtrsena) ಎಂಬ ಎಕ್ಸ್ ಬಳಕೆದಾರರೊಬ್ಬರು ಈ ಭಾವಚಿತ್ರಗಳನ್ನು ಅಕ್ಟೋಬರ್ 29ರಂದು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ದಂಪತಿಗಳ ಭಾವಚಿತ್ರದಲ್ಲಿರುವ ಪುರುಷನನ್ನು ‘ಮುಸ್ಲಿಂ’ ಎಂದೂ ಹಾಗೂ ಮಹಿಳೆಯನ್ನು ‘ಹಿಂದೂ’ ಎಂದು ಹಣೆಪಟ್ಟಿ ಹಚ್ಚಲಾಗಿದೆ. ಈ ದಂಪತಿಗಳ ಭಾವಚಿತ್ರ 2023ರದ್ದಾಗಿದ್ದು, ಗಾಯಗೊಂಡಿರುವ ಮುಖದ ಭಾವಚಿತ್ರ 2025ರದ್ದಾಗಿದೆ ಎಂದು ಎಕ್ಸ್ ಬಳಕೆದಾರರು ಆರೋಪಿಸಿದ್ದಾರೆ.
“ಈ ಮಹಿಳೆಯು 2023ರಲ್ಲಿ ಅಬ್ದುಲ್ ಆದಿಲ್ ಖಾನ್ ಎಂಬಾತನನ್ನು 2023ರಲ್ಲಿ ವಿವಾಹವಾಗಿದ್ದಳು. ತನ್ನ ಹೆಸರನ್ನು ನಂದಿನಿ ಮಂಡಲ್ ನಿಂದ ಝರಾ ಇಸ್ಲಾಂ ಎಂದು ಬದಲಿಸಿಕೊಂಡಿದ್ದಳು ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಹಲವಾರು ಹಿಂದೂಗಳು ಆಕೆಗೆ ತಿಳಿ ಹೇಳಲು ಪ್ರಯತ್ನಿಸಿದರೂ, ಆಕೆ ಅದನ್ನು ಕೇಳಿಸಿಕೊಳ್ಳಲಿಲ್ಲ. ಈ ನಾಚಿಕೆಗೇಡು ಸಿಂಹಿಣಿ ಅಬ್ದುಲ್ ನ ಪ್ರೇಮದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಳು” ಎಂದು ಟೀಕಿಸಲಾಗಿದೆ.
ಈ ಪೋಸ್ಟ್ ಅನ್ನು ಇದುವರೆಗೆ 6,40,000 ಮಂದಿ ವೀಕ್ಷಣೆ ಮಾಡಿದ್ದು, ಸರಿಸುಮಾರು 10,000 ಲೈಕ್ ಗಳು ಹಾಗೂ 4,200ಕ್ಕೂ ಹೆಚ್ಚು ಬಾರಿ ರೀಪೋಸ್ಟ್ ಆಗಿದೆ.
@hindulegalsena ಎಂಬ ಮತ್ತೊಬ್ಬ ಬಳಕೆದಾರರೂ ಈ ವೈರಲ್ ಪೋಸ್ಟ್ ಹಂಚಿಕೊಂಡಿದ್ದಾರೆ. “ಆಕೆಯ ಅಬ್ದುಲ್ ಕೂಡಾ ಅದೇ ರೀತಿ ಬದಲಾಗಿದ್ದ. ಹಲವಾರು ಜನರು ಅಬ್ದುಲ್ ನಿಂದ ದೂರ ಉಳಿಯುವಂತೆ ಆಕೆಗೆ ಎಚ್ಚರಿಸಿದ್ದರು. ಆತ ಆಕೆಯನ್ನು ದೋಚಿದ. ಪ್ರೀಝರ್ ನಲ್ಲಿ ಹಾಕಿದ. ಆದರೂ ಆಕೆ ಜನರ ಮಾತನ್ನು ಕೇಳಿಸಿಕೊಂಡಿರಲಿಲ್ಲ. ಆಕೆ ಅದಾಗಲೇ ಎರಡು ವರ್ಷಗಳಿಂದ ಅಬ್ದುಲ್ ನ ಪ್ರೀತಿಯಲ್ಲಿ ಮುಳುಗಿದ್ದಳು. ಅಬ್ದುಲ್ ತನ್ನ ಕಾಮವನ್ನು ಆಕೆಯಿಂದ ಪೂರೈಸಿಕೊಂಡಿದ್ದ ಹಾಗೂ ಬಳಿಕ ಆತ ಆಕೆಯನ್ನು ಮನೆಯಿಂದ ಒದ್ದೋಡಿಸಿದ್ದ. ಇದೀಗ ಆಕೆ ಅಳುತ್ತಿದ್ದಾಳೆ, ಜನರ ನೆರವಿಗಾಗಿ ಮೊರೆ ಇಡುತ್ತಿದ್ದಾಳೆ” ಎಂದು ಆರೋಪಿಸಿದ್ದಾರೆ.
ಇದೇ ರೀತಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರೂ ಪೋಸ್ಟ್ ಹಂಚಿಕೊಂಡಿದ್ದು, ಮಹಿಳೆ ಹಿಂದೂ ಆಗಿದ್ದು, ಆಕೆಯ ಮುಸ್ಲಿಂ ಸಂಗಾತಿಯಾದ ಅಬ್ದುಲ್ ಆದಿಲ್ ಖಾನ್ ಆಕೆಯ ಮೇಲೆ ದಾಳಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
@Marssxyz ಎಂಬ ಬಳಕೆದಾರರು ಗಾಯಗೊಂಡ ಮಹಿಳೆಯ ಬಗ್ಗೆ ವಿಭಿನ್ನವಾದ ಪ್ರತಿಪಾದನೆ ಮಾಡಿದ್ದು, ಆಕೆ ಅಳುತ್ತಿರುವ ದೃಶ್ಯ ದ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಮಹಿಳೆಯೊಬ್ಬರು ಪಟಾಕಿ ಹಚ್ಚುತ್ತಿದ್ದು, ಅದು ಸಿಡಿದು ಮಹಿಳೆಯ ಮುಖಕ್ಕೆ ಬಡಿಯುವುದರೊಂದಿಗೆ ಆ ದೃಶ್ಯಾವಳಿ ಅಂತ್ಯಗೊಳ್ಳುತ್ತದೆ. ಭಾವಚಿತ್ರದಲ್ಲಿರುವ ಮಹಿಳೆ ಹಾಗೂ ವೀಡಿಯೊದಲ್ಲಿರುವ ಮಹಿಳೆ ಇಬ್ಬರೂ ಒಬ್ಬರೇನಾ ಎಂಬುದನ್ನು ದೃಢಪಡಿಸಿಕೊಳ್ಳಲು ಈವರೆಗೆ ಸಾಧ್ಯವಾಗಿದ್ದರೂ, ಆ ಮಹಿಳೆ ದೀಪಾವಳಿ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಆ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಪಾದಿಸಿದ್ದಾರೆ.
ಫ್ಯಾಕ್ಟ್ ಚೆಕ್
ಸದರಿ ಮಹಿಳೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು @Marssxyz ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದ ವೀಡಿಯೊವನ್ನು ರಿವರ್ಸ್ ಸರ್ಚ್ ಗೆ ಒಳಪಡಿಸಿದಾಗ, ಈ ವೀಡಿಯೊ ಜೌತಿ ಇಸ್ಲಾಂ ಎಂಬ ಫೇಸ್ ಬುಕ್ ಪುಟಕ್ಕೆ ಕರೆದೊಯ್ದಿದೆ. ಆ ಫೇಸ್ ಬುಕ್ ಪುಟದಲ್ಲೇ ಸದರಿ ವೀಡಿಯೊವನ್ನೂ ಪೋಸ್ಟ್ ಮಾಡಲಾಗಿದೆ. ಆ ಫೇಸ್ ಬುಕ್ ಪುಟದ ಸ್ವವವಿರದ ಪ್ರಕಾರ, ಆ ಫೇಸ್ ಬುಕ್ ಪುಟವು ಬಾಂಗ್ಲಾದೇಶಿ ನಟಿ ಜೌತಿ ಇಸ್ಲಾಂಗೆ ಸಂಬಂಧಿಸಿದ್ದಾಗಿದೆ.
ಆ ಪೋಸ್ಟ್ ಗೆ, “ಜೀವನದಲ್ಲಿನ ಪ್ರತಿಯೊಂದರ ಹಿಂದೆಯೂ ತಿಳಿದಿರದ ಕತೆ ಇರುತ್ತದೆ – ಆ ಕತೆಯೇನೆಂದು ತಿಳಿದುಕೊಳ್ಳಲು ಅಥವಾ ಅರ್ಥ ಮಾಡಿಕೊಳ್ಳಲು ಯಾರಿಗೂ ಬೇಕಿಲ್ಲ” ಎಂಬ ಶೀರ್ಷಿಕೆ ನೀಡಲಾಗಿದೆ.
ದಂಪತಿಗಳ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಇದೇ ರೀತಿಯ ಭಾವಚಿತ್ರವನ್ನು ನಟಿ ಜೌತಿ ಇಸ್ಲಾಂ ಅವರೇ ಹಂಚಿಕೊಂಡಿದ್ದು, ಅದು ಮತ್ತೊಂದು ಬಾಂಗ್ಲಾದೇಶಿ ಚಲನಚಿತ್ರ ‘ಬಿಧೋಬಾ ಬವು (ವಿಧವೆ ಪತ್ನಿ)”ಗೆ ಸಂಬಂಧಿಸಿದ್ದಾಗಿದೆ. ಈ ಭಾವಚಿತ್ರವನ್ನು ಫೆಬ್ರವರಿಯಲ್ಲಿ ಹಂಚಿಕೊಳ್ಳಲಾಗಿದೆ.
ಹೀಗಾಗಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದಂಪತಿಗಳ ಭಾವಚಿತ್ರ, ಸುಟ್ಟು ಗಾಯಗಳಿಗೀಡಾಗಿರುವ ಮಹಿಳೆ ಹಾಗೂ ವೀಡಿಯೊ ಲವ್ ಜಿಹಾದ್ ಗೆ ಸಂಬಂಧಿಸಿದ್ದಲ್ಲ; ಬದಲಿಗೆ, ಬಾಂಗ್ಲಾದೇಶಿ ಚಲನಚಿತ್ರಗಳಿಗೆ ಸಂಬಂಧಿಸಿದ್ದಾಗಿದೆ ಎಂಬುದು ದೃಢಪಟ್ಟಿದೆ. ಈ ಪೈಕಿ ಒಂದು ಪೋಸ್ಟರ್ ಆಗಿದ್ದರೆ, ಮತ್ತೊಂದು ನಟಿ ಜೌತಿ ಇಸ್ಲಾಂ ಅವರು ಮೇಕಪ್ ಮಾಡಿಕೊಳ್ಳುವಾಗಿನ ತೆರೆಯ ಹಿಂದಿನ ಫೋಟೊ ಆಗಿದೆ.
ಸೌಜನ್ಯ: altnews.in







