ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಪಿಐಬಿ ಕಾರ್ಯಾಚರಣೆ

ಹೊಸದಿಲ್ಲಿ: ಭಾರತದಲ್ಲಿ ಸುಳ್ಳುಸುದ್ದಿ ಹಾಗೂ ತಪ್ಪು ಮಾಹಿತಿಯನ್ನು ಹರಡುತ್ತಿರುವ 9 ಯೂಟ್ಯೂಬ್ ಚಾನೆಲ್ ಗಳನ್ನು ಪತ್ರಿಕಾ ಮಾಹಿತಿ ಬ್ಯೂರೋ(ಪಿಐಬಿ)ದ ಸತ್ಯಶೋಧನ ಘಟಕವು ಭೇದಿಸಿದೆ.
‘ಭಾರತ್ ಏಕತಾ ನ್ಯೂಸ್’,‘ಬಜರಂಗ್ ಎಜುಕೇಶನ್’, ‘ಬಿಜೆ ನ್ಯೂಸ್’, ‘ಸನ್ಸಾನಿ ಲೈವ್ ಟಿವಿ’, ‘ಜಿವಿಟಿ ನ್ಯೂಸ್’, ‘ಡೈಲಿ ಸ್ಟಡಿ’, ‘ಅಬ್ ಬೊಲೇಗಾ ಭಾರತ್, ‘ಡೈಲಿ ಸ್ಟಡಿ’, ‘ಸರಕಾರಿ ಯೋಜನಾ ಆಫೀಶಿಯಲ್’ ಹಾಗೂ ‘ಆಪ್ ಕೆ ಗುರೂಜಿ’ಎಂಬ ಈ 9 ಯುಟ್ಯೂಬ್ ಚಾನಲ್ ಗಳು ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿ ಹರಡುತ್ತಿರುವುದನ್ನು ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯಶೋಧನಾ ಘಟಕವು ಗುರುತಿಸಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಶನಿವಾರ ತಿಳಿಸಿದೆ.
ಈ ಚಾನೆಲ್ ಗಳು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುತ್ತಿರುವ ಬಗ್ಗೆ 9 ಪ್ರತ್ಯೇಕ ಟ್ವಿಟರ್ ಥ್ರೆಡ್ ಗಳನ್ನು ಬಳಸಿಕೊಂಡು ಸತ್ಯಶೋಧನೆಗಳನ್ನು ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಈ ವಾಹಿನಿಗಳ ಚಂದಾದಾರರ ಬಳಗವು 11 ,700 ರಿಂದ 34.70 ಲಕ್ಷದವರೆಗೆ ಇರುವುದನ್ನು ಸಚಿವಾಲಯ ಗಮನಕ್ಕೆ ತೆಗೆದುಕೊಂಡಿದೆ.
ಈ ಚಾನೆಲ್ ಗಳು ಭಾರತದ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಮುಖ್ಯ ಚುನಾವಣಾ ಆಯುಕ್ತರಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡಿರುವ ಬಗ್ಗೆ ಸಚಿವಾಲಯ ಬೆಳಕು ಚೆಲ್ಲಿದೆ. ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ , ಇವಿಎಂ ನಿಷೇಧ, ಸಚಿವರ ರಾಜೀನಾಮೆ ಅಥವಾ ಸಾವಿನ ಕುರಿತ ಸುಳ್ಳು ಸುದ್ದಿಗಳು, ಕರೆನ್ಸಿ ನೋಟ್ ನಿಷೇಧ, ಬ್ಯಾಂಕ್ಗಳ ಮುಚ್ಚುಗಡೆ ಇತ್ಯಾದಿ ಕಪೋಲಕಲ್ಪಿತ ಸುದ್ದಿಗಳನ್ನು ಹಾಗೂ ಸರಕಾರಿ ಯೋಜನೆಗಳ ಕುರಿತು ತಪ್ಪು ಮಾಹಿತಿಗಳನ್ನು ಈ ವಾಹಿನಿಗಳು ಪ್ರಸಾರ ಮಾಡಿದ್ದಾಗಿ ಸಚಿವಾಲಯ ಹೇಳಿದೆ.
ಇದಕ್ಕಿಂತಲೂ ಮಿಗಿಲಾಗಿ, ಈ ವಾಹಿನಿಗಳು ಪ್ರಾಕೃತಿಕ ವಿಕೋಪಗಳು, ಭಾರತೀಯ ಪೌರರ ಸಾವಿನ ಸುದ್ದಿಗಳು, ಸಶಸ್ತ್ರ ಪಡೆಗಳ ನಿಯೋಜನೆ, ಶಾಲೆಗಳ ಮುಚ್ಚುಗಡೆ ಇತ್ಯಾದಿಗಳ ಕುರಿತು ತಪ್ಪು ಮಾಹಿತಿಯನ್ನು ಪ್ರಚುರಪಡಿಸಿದ್ದವೆಂದು ಆರೋಪಿಸಲಾಗಿದೆ.
ಒಟ್ಟಾರೆಯಾಗಿ 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದು, ಯೂಟ್ಯೂಬ್ನಲ್ಲಿ ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡಿ ಹಣ ಮಾಡುವ ಪ್ರವೃತ್ತಿಯು ಬೆಳೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.







