ದಿಲ್ಲಿ ಹೊಟೇಲ್ ಕೊಠಡಿಯಲ್ಲಿ ಪೈಲಟ್ ಮೃತ್ಯು; ಹೃದಯಾಘಾತ ಶಂಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಏರ್ ಇಂಡಿಯಾದ 46 ವರ್ಷದ ಪೈಲಟ್ ಮೃತದೇಹ ದಿಲ್ಲಿಯ ಹೊಟೇಲ್ನ ಕೊಠಡಿಯೊಂದರಲ್ಲಿ ಪತ್ತೆಯಾಗಿದೆ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಮೃತಪಟ್ಟ ಪೈಲಟ್ನನ್ನು ಮುಂಬೈ ಮೂಲದ ಸನ್ನಿ ಅಸಲ್ಡೇಕರ್ ಎಂದು ಗುರುತಿಸಲಾಗಿದೆ. ಅವರು ಈ ಹಿಂದೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಕೆಲಸ ಮಾಡಿದ್ದು, ವೈಡ್-ಬಾಡಿ ಬೋಯಿಂಗ್ 787 ವಿಮಾನಗಳನ್ನು ಚಲಾಯಿಸಲು ಕನ್ವರ್ಷನ್ ತರಬೇತಿ ಪಡೆಯುತ್ತಿದ್ದರು.
ದಿಲ್ಲಿಯ ವಸಂತ್ ಕುಂಜ್ನಲ್ಲಿರುವ ‘ದಿ ಗ್ರಾಂಡ್’ ಹೊಟೇಲ್ನಲ್ಲಿ ತಂಗಿದ್ದ ಅತಿಥಿಯೊಬ್ಬರು ಅಸ್ವಸ್ಥಗೊಂಡಿರುವ ಬಗ್ಗೆ ಶುಕ್ರವಾರ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಪೊಲೀಸರು ತತ್ಕ್ಷಣ ಸ್ಥಳಕ್ಕೆ ತಲುಪಿದರು. ಆ ವ್ಯಕ್ತಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಂತಿಮ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಬಿಎನ್ಎಸ್ಎಸ್ನ ಸೆಕ್ಷನ್ 194ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




