‘ಪಿನ್ ಕೋಡ್ 193224’: ಭಾರತದ ಪ್ರಪ್ರಥಮ ಅಂಚೆ ಕಚೇರಿ ಬಗ್ಗೆ ಇಲ್ಲಿದೆ ಮಾಹಿತಿ

ಶ್ರೀನಗರ: ಇತ್ತೀಚಿನವರೆಗೆ ಕೊನೆಯ ಅಂಚೆ ಕಚೇರಿ ಎಂದೇ ಕರೆಸಿಕೊಳ್ಳುತ್ತಿದ್ದ ಭಾರತದ ಪ್ರಪ್ರಥಮ ಅಂಚೆ ಕಚೇರಿಯು ಜಮ್ಮು ಮತ್ತು ಕಾಶ್ಮೀರದ ಕೀರನ್ ಸೆಕ್ಟರ್ ನಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿಯ ಕಿಶನ್‍ಗಂಗಾ ನದಿಯ ತಟದಲ್ಲಿದೆ ಎಂದು newindianexpress.com ವರದಿ ಮಾಡಿದೆ.
ಪಿನ್ ಕೋಡ್ ಸಂಖ್ಯೆ 193224 ಅನ್ನು ಹೊಂದಿರುವ ಈ ಅಂಚೆ ಕಚೇರಿಯನ್ನು ಓರ್ವ ಪೋಸ್ಟ್ ಮಾಸ್ಟರ್ ಹಾಗೂ ಮೂವರು ಸಿಬ್ಬಂದಿ ನಿಭಾಯಿಸುತ್ತಿದ್ದಾರೆ. ತೀರಾ ಇತ್ತೀಚಿನವರೆಗೆ ಈ ಅಂಚೆ ಕಚೇರಿಯನ್ನು ದೇಶದ ಕೊನೆಯ ಅಂಚೆ ಕಚೇರಿ ಎಂದೇ ಹೇಳಲಾಗುತ್ತಿತ್ತು. ಆದರೀಗ, ಹೊಸ ನಾಮಫಲಕದಲ್ಲಿ “ಭಾರತದ ಪ್ರಪ್ರಥಮ ಅಂಚೆ ಕಚೇರಿ” ಎಂದು ಬಣ್ಣಿಸಲಾಗಿದೆ.
ಈ ಅಂಚೆ ಕಚೇರಿಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಳಿ ಇರುವ ಗಡಿ ನಿಯಂತ್ರಣ ರೇಖೆಯ ಬಲ ಅಂಚಿನಲ್ಲಿದೆ. ಈ ಗಡಿ ನಿಯಂತ್ರಣ ರೇಖೆಯ ಒಂದು ಬದಿ ಕಿಶನ್ ಗಂಗಾ ನದಿ ಎಂದು ಕರೆಯಲಾಗುವ ತೊರೆಯೊಂದು ಹರಿದರೆ, ಮತ್ತೊಂದು ಬದಿಯಲ್ಲಿ ನೀಲಂ ನದಿ ಹರಿಯುತ್ತದೆ. ಭಾರತದ ನದಿ ತಟದಲ್ಲಿ ಈ ಅಂಚೆ ಕಚೇರಿ ತಲೆ ಎತ್ತಿ ನಿಂತಿದೆ.
ಕಳೆದ ಎರಡು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ಗಡಿ ನಡುವಿನ ಕದನ ವಿರಾಮಕ್ಕೆ ಯಾವುದೇ ತೊಂದರೆ ಆಗಿಲ್ಲದೆ ಇರುವುದರಿಂದ ಗಡಿಯ ಭೀತಿಯಿಲ್ಲದೆ ಪೋಸ್ಟ್ ಮಾಸ್ಟರ್ ಶಾಕಿರ್ ಭಟ್ ಹಾಗೂ ಮೂವರು ಸಿಬ್ಬಂದಿಗಳು ಅಂಚೆಪತ್ರಗಳನ್ನು ಪೂರೈಸುತ್ತಿದ್ದಾರೆ.
ಈ ಐತಿಹಾಸಿಕ ಅಂಚೆ ಕಚೇರಿಯು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಪ್ರತ್ಯೇಕ ದೇಶಗಳಾಗುವ ಮುನ್ನವೇ ಕಾರ್ಯಾಚರಣೆ ಪ್ರಾರಂಭಿಸಿತ್ತು. 1965, 1971 ಹಾಗೂ 1998ರ ಕಾರ್ಗಿಲ್ ಯುದ್ಧಗಳ ಸಂದರ್ಭದಲ್ಲಿಯೂ ಈ ಅಂಚೆ ಕಚೇರಿಯು ತಾನು ಸ್ಥಳೀಯರು ಹಾಗೂ ಸೇನಾಪಡೆಗಳಿಗೆ ಒದಗಿಸಬೇಕಾದ ತನ್ನ ಕರ್ತವ್ಯದಿಂದ ಹಿಂದೆ ಸರಿದಿರಲಿಲ್ಲ.
1993ರಲ್ಲಿ ಈ ಭಾಗದಲ್ಲಿ ಭಾರಿ ಪ್ರವಾಹ ಬಂದು ಅಂಚೆ ಕಚೇರಿಯು ಕೊಚ್ಚಿ ಹೋದಾಗಲೂ ಪೋಸ್ಟ್ ಮಾಸ್ಟರ್ ಶಕೀರ್ ಭಟ್ ಅವರ ನಿವಾಸದ ಹೊರಗೆ ಕಾರ್ಯಾಚರಿಸುವುದನ್ನು ಈ ಅಂಚೆ ಕಚೇರಿ ಸ್ಥಗಿತಗೊಳಿಸಿರಲಿಲ್ಲ. ಗಡಿ ನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾಗಿರುವ ಸೇನಾ ಸಿಬ್ಬಂದಿಗಳಿಂದ ಈ ಅಂಚೆ ಕಚೇರಿಯು ಬಹುತೇಕ ಅಂಚೆ ಹಾಗೂ ತ್ವರಿತ ಅಂಚೆಗಳನ್ನು ಸ್ವೀಕರಿಸುತ್ತದೆ ಮತ್ತು ರವಾನಿಸುತ್ತದೆ ಎಂದು ಸ್ಥಳೀಯ ನಿವಾಸಿಯಾದ ತುಫೈಲ್ ಅಹ್ಮದ್ ಹೇಳಿದ್ದಾರೆ.
ಕೀರನ್ ಅಂಚೆ ಕಚೇರಿಗೆ ತ್ವರಿತ ಪೋಸ್ಟ್ ಗಳು ತಲುಪಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಈ ಅಂಚೆಪತ್ರಗಳನ್ನು ಶಕೀರ್ ಹಾಗೂ ಮೂವರು ಅಂಚೆ ರವಾನೆದಾರರು ತಪ್ಪದೆ ಸಂಬಂಧಿಸಿದ ವಿಳಾಸಕ್ಕೆ ತಲುಪಿಸುತ್ತಾರೆ. ಕಳೆದ ವರ್ಷ ಗಡಿ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ಗಮನಾರ್ಹವಾಗಿ ಹಿಂಪಡೆದು, ಪ್ರವಾಸಿಗರಿಗೆ ಮುಕ್ತಗೊಳಿಸಿದ ನಂತರ, ಪ್ರವಾಸಿಗರ ಪಾಲಿಗೆ ಕೀರನ್ ಆಕರ್ಷಕ ಪ್ರವಾಸಿ ತಾಣವಾಗಿ ಬದಲಾಗಿದೆ ಎಂದು ಶಕೀರ್ ಹೇಳುತ್ತಾರೆ.







