'8.5 ಕೆಜಿ ತೂಕ ಇಳಿದಿದೆ, ಇನ್ನೆರಡು ದಿನಗಳಲ್ಲಿ ಸಾವಿನ ಅಪಾಯ': ಸೋನಮ್ ವಾಂಗ್ಚುಕ್ ರಿಗೆ ಬಲವಂತವಾಗಿ ಆಹಾರ ನೀಡುವಂತೆ ದಿಲ್ಲಿ ಹೈಕೋರ್ಟ್ನಲ್ಲಿ ಅರ್ಜಿ

Photo credit: PTI
ಹೊಸದಿಲ್ಲಿ: ದಿಲ್ಲಿಯ ಜಂತರ್ ಮಂತರ್ ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರ ಹಿನ್ನೆಲೆಯಲ್ಲಿ ಅವರಿಗೆ ಬಲವಂತವಾಗಿ ಆಹಾರ ನೀಡುವಂತೆ ಕೋರಿ ದಿಲ್ಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಅವರ ಉಪವಾಸ ಸತ್ಯಾಗ್ರಹವು 18ನೇ ದಿನಕ್ಕೆ ಕಾಲಿಟ್ಟಿದ್ದು, ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೇಂದ್ರ ಮತ್ತು ದಿಲ್ಲಿ ಸರ್ಕಾರಕ್ಕೆ ತುರ್ತು ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ ಎಂದು ತಿಳಿದುಬಂದಿದೆ.
ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ರಾಕೇಶ್ ಕುಮಾರ್ ಸೈನಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಉಪವಾಸ ಆರಂಭಿಸಿದಾಗಿನಿಂದ ಸೋನಮ್ ವಾಂಗ್ಚುಕ್ ಅವರು ಸುಮಾರು 8.5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನೆಯ ಆಯೋಜಕರು ಮಾಹಿತಿ ನೀಡಿದ್ದಾರೆ.
ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಹದಗೆಟ್ಟಿದ್ದು, ಉಪವಾಸ ಮುಷ್ಕರ ಹೀಗೆಯೇ ಮುಂದುವರಿದರೆ ಮುಂದಿನ ಎರಡು ದಿನಗಳಲ್ಲಿ ಅವರು ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ಜೀವ ಉಳಿಸುವುದು ಅತ್ಯಂತ ಪ್ರಮುಖ ಆದ್ಯತೆಯಾಗಿದ್ದು, ನ್ಯಾಯಾಲಯವು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಧಿಕಾರಿಗಳು ತಕ್ಷಣವೇ ವಾಂಗ್ಚುಕ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಮತ್ತು ಅವರ ಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯಲು ವೈದ್ಯಕೀಯ ಉಸ್ತುವಾರಿಯಲ್ಲಿ ಅಗತ್ಯ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ದ್ರವ ಆಹಾರವನ್ನು ನೀಡಬೇಕು. ಅವರ ಇಚ್ಛೆಗೆ ವಿರುದ್ಧವಾಗಿಯಾದರೂ, ಜೀವ ರಕ್ಷಣೆಗಾಗಿ ಇಂತಹ ಕ್ರಮ ಅಗತ್ಯ ಎಂದು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಸರ್ಕಾರವು ಹೋರಾಟಗಾರನ ಕಡೆಗೆ ತನ್ನ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಅರ್ಜಿದಾರರು, ಸರ್ಕಾರವು ವಾಂಗ್ಚುಕ್ ಅವರನ್ನು ಒಬ್ಬ ಅಪರಾಧಿ ಅಥವಾ ದೇಶದ್ರೋಹಿಯಂತೆ ನಡೆಸಿಕೊಳ್ಳುತ್ತಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಶಾಂತಿಯುತ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹಗಳು ಪ್ರಜಾಸತ್ತಾತ್ಮಕ ಹಕ್ಕುಗಳಾಗಿವೆ. ಅದೇ ರೀತಿ ಪ್ರತಿಯೊಬ್ಬ ನಾಗರಿಕನ ಜೀವ ಮತ್ತು ಆರೋಗ್ಯವನ್ನು ರಕ್ಷಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅರ್ಜಿ ಉಲ್ಲೇಖಿಸಿದೆ.






