ಭಾವನೆಗಳೊಂದಿಗೆ ಆಟವಾಡಬೇಡಿ, ದಯವಿಟ್ಟು ಇದನ್ನು ನಿಲ್ಲಿಸಿ: ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳಿಗೆ ಏರ್ ಇಂಡಿಯಾ ವಿಮಾನ ದುರಂತದ ಕುಟುಂಬಸ್ಥರ ಮನವಿ

PC : indiatoday.in
ಹೊಸದಿಲ್ಲಿ: ಕಳೆದ ಗುರುವಾರ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಭೀಕರವಾಗಿ ಅಪಘಾತವಾಗಿ ಕನಿಷ್ಠ 274 ಜನರು ಮೃತಪಟ್ಟಿದ್ದರು. ಈ ಆಘಾತದದಿಂದ ಸಂತ್ರಸ್ತರ ಕುಟುಂಬಗಳು ಹೊರಬರಲು ಹೆಣಗಾಡುತ್ತಿವೆ. ಈ ಮಧ್ಯೆ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳು ಮೃತಪಟ್ಟವರ ಕುರಿತು ತಪ್ಪು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ. ದಯವಿಟ್ಟು ಇದನ್ನು ನಿಲ್ಲಿಸಿ ಎಂದು ಸಂತ್ರಸ್ಥರ ಕುಟುಂಬಸ್ಥರು ಕಟುವಾದ ಮನವಿ ಮಾಡಿದ್ದಾರೆ.
ವಿಮಾನ ಅಪಘಾತದಲ್ಲಿ ರಾಜಸ್ತಾನ ಮೂಲದ ಕೋಮಿ ವ್ಯಾಸ್, ಅವರ ಪತಿ ಪ್ರತೀಕ್ ಜೋಶಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳು ಸಂತ್ರಸ್ತರ ನಕಲಿ ಚಿತ್ರಗಳು ಮತ್ತು ನಕಲಿ ವೀಡಿಯೊಗಳನ್ನು ಬಳಸಿಕೊಂಡು ಲೈಕ್, ಫಾಲೋವರ್ಸ್ ಮತ್ತು ವೀಕ್ಷಣೆಗಳನ್ನು ಗಳಿಸುವ ಚಾಳಿ ಮುಂದುವರೆಸಿದ್ದಾರೆ ಎಂದು ಕೋಮಿ ವ್ಯಾಸ್ ಅವರ ಸಂಬಂಧಿ ಕುಲ್ ದೀಪ್ ಭಟ್ ಆರೋಪಿಸಿದ್ದಾರೆ.
ನಮ್ಮದೂ ಸೇರಿಂದಂತೆ ವಿಮಾನ ದುರಂತದಲ್ಲಿ ಮಡಿದ ಸಂತ್ರಸ್ತರ ಕುಟುಂಬಗಳು ಮಾನಸಿಕವಾಗಿ ಕುಗ್ಗಿವೆ. ಈ ನಡುವೆ ಇನ್ಫ್ಲೂಯೆನ್ಸರ್ ಗಳು ತಮ್ಮ ಫಾಲೋವರ್ ಗಳನ್ನು, ಲೈಕ್ ಗಳನ್ನು ಹೆಚ್ಚಿಸಲು ವಿಮಾನ ಅಪಘಾತದ ದೃಶ್ಯಗಳನ್ನು ಎಡಿಟ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಕೋಮಿ ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ವಿಮಾನದಲ್ಲಿ ಕುಳಿತಿದ್ದ ದೃಶ್ಯವನ್ನು ಸೆಲ್ಫಿ ತೆಗೆದು ನಮ್ಮ ಕುಟುಂಬದ ವಾಟ್ಸಾಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದರು. ಆ ಫೊಟೋ ಈಗಾಗಲೇ ವೈರಲ್ ಆಗಿದೆ. ಈಗ ಜನರು ಆ ಫೊಟೋ ಬಳಸಿಕೊಂಡು ವೀಡಿಯೊ ರಚಿಸುತ್ತಿದ್ದಾರೆ. ಅಂತಹ ಒಂದು ವೀಡಿಯೋ ಈಗಾಗಲೇ ದೇಶದಾದ್ಯಂತ ವೈರಲ್ ಆಗಿದೆ. AI ಬಳಸಿಕೊಂಡು ಫೋಟೋದಿಂದ ನಕಲಿ ವೀಡಿಯೊ ಮಾಡಲಾಗಿದೆ”, ಎಂದು ಅವರು ಉಲ್ಲೇಖಿಸಿದರು.
"ನಿನ್ನೆಯಿಂದ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ಪ್ರಸಾರವಾಗುತ್ತಿದೆ. ಅದು ನಮಗೆ ತುಂಬಾ ನೋವುಂಟುಮಾಡುತ್ತಿದೆ. ಕೋಮಿಯ ಮಗಳು ಮಿರಾಯಾಳ ಚಿತ್ರವದು. ಆ ಹುಡುಗಿ ಮಿರಾಯಾ, ತುಂಬಾ ಮುದ್ದಾದ ಹುಡುಗಿ. ನಾವು ಡಿ ಎನ್ ಎ ಮಾದರಿ ನೀಡಿದ್ದರೂ ಈಗ ಅದು ಹೊಂದಾಣಿಕೆಯಾಗುತ್ತಿಲ್ಲ. ಆದರೆ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ, ಆಕೆಯ ದೇಹದ ಅಂತ್ಯಕ್ರಿಯೆ ನಡೆದಿದೆ ಎಂದು ಜನರು ಹೇಳುತ್ತಿದ್ದಾರೆ. ಆ ಕುರಿತ ವೀಡಿಯೋಗಳೂ ಪ್ರಸಾರವಾಗುತ್ತಿವೆ”, ಎಂದು ಭಟ್ ಅವರು ಭಾವುಕರಾದರು.
ಕೋಮಿ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು ಕಾಣಿಸಿಕೊಂಡಿದ್ದರಿಂದ ಕುಟುಂಬದ ದುಃಖ ಇನ್ನಷ್ಟು ಹದಗೆಟ್ಟಿದೆ. "ಕೋಮಿಯ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನಕಲಿ ಖಾತೆಗಳನ್ನು ಮಾಡಲಾಗಿದೆ. ಈ ರೀತಿಯ ಕೆಲಸಗಳನ್ನು ಮಾಡುವುದನ್ನು ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳು ದಯವಿಟ್ಟು ನಿಲ್ಲಿಸಬೇಕೆಂದು ನಾನು ವಿನಂತಿಸುತ್ತೇನೆ. ನಿಮ್ಮ ಖಾತೆಗಳಿಗೆ ಲೈಕ್ ಮತ್ತು ಫಾಲೋವರ್ಸ್ ಗಳನ್ನು ಹೆಚ್ಚಿಸಲು ನೀವು ನಮಗೆ ಏಕೆ ಇಷ್ಟೊಂದು ಮಾನಸಿಕ ಆಘಾತವನ್ನು ನೀಡುತ್ತಿದ್ದೀರಿ?", ಕುಲ್ ದೀಪ್ ಭಟ್ ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ಮಧ್ಯಾಹ್ನ ಲಂಡನ್ ಗೆ ಹೊರಟಿದ್ದ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಮೇಘನಿನಗರ ಪ್ರದೇಶದ ವೈದ್ಯಕೀಯ ಹಾಸ್ಟೆಲ್ ಮತ್ತು ಕ್ಯಾಂಟೀನ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 241 ಜನರು ಈ ಅಪಘಾತದಲ್ಲಿ ಮೃತಪಟ್ಟಿದ್ದರು. ಜೊತೆಗೆ ವಸತಿ ಪ್ರದೇಶದಲ್ಲಿದ್ದ ಹಲವರೂ ಮೃತಪಟ್ಟಿದ್ದರು. ಅದೇ ವಿಮಾನದಲ್ಲಿ ಲಂಡನ್ ನಲ್ಲಿ ಕುಟುಂಬದ ಸಮೇತ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಕೋಮಿ ವ್ಯಾಸ್, ಅವರ ಪತಿ ಪ್ರತೀಕ್ ಜೋಶಿ ಮತ್ತು ಅವಳಿ ಪುತ್ರರಾದ ಪ್ರದ್ಯುತ್ ಮತ್ತು ನಕುಲ್ ಮತ್ತು ಮಗಳು ಮಿರಾಯಾ ಪ್ರಯಾಣಿಸುತ್ತಿದ್ದರು.
ಆನ್ಲೈನ್ನಲ್ಲಿ ಹರಿದಾಡುತ್ತಿರುವ ಮತ್ತೊಂದು ಸುಳ್ಳು ಹೇಳಿಕೆಯನ್ನು ಉಲ್ಲೇಖಿಸಿದ ಅವರು, “ಹಂಚಿಕೊಳ್ಳಲಾಗುತ್ತಿರುವ ಒಂದು ವೀಡಿಯೊ ಮಕ್ಕಳ ಮೃತ ದೇಹಗಳನ್ನು ತೋರಿಸುತ್ತದೆ ಎಂದು ಹೇಳುತ್ತದೆ. ಆದರೆ ವೀಡಿಯೊದಲ್ಲಿ ಕಂಡುಬರುವ ಶವ ಪೆಟ್ಟಿಗೆಯ ಮೇಲೆ ಹಡಪ್ ಮತ್ತು ಮೋಹನ್ ಚೌಧರಿಯವರ ಮೃತ ದೇಹ ಎಂದು ಬರೆಯಲಾಗಿದೆ. ಬೇರೆ ಯಾವುದೋ ಘಟನೆಗೆ ಸಂಬಂಧಿಸಿದ ವೀಡಿಯೋವನ್ನು ಇದರೊಂದಿಗೆ ತಳುಕು ಹಾಕಲಾಗಿದೆ. ಮನಸ್ಸಿಗೆ ಆಘಾತವಾಗಿರುವ ನಡುವೆ ಇಂಥದ್ದನ್ನು ನಾವು ನೋಡಬೇಕಾಗಿದೆ. ಇದು ಮತ್ತಷಷ್ಟು ನೋವು ಕೊಡುತ್ತಿದೆ”, ಎಂದು ಅವರು ಪ್ರತಿಕ್ರಿಯಸಿದರು.
"ಈ ಕುರಿತ ತಪ್ಪು ಮಾಹಿತಿ, ವೀಡಿಯೋಗಳನ್ನು ಹಂಚಿಕೊಳ್ಳುವ ಮುನ್ನ ಅಧಿಕಾರಿಗಳು ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಮೂಲಭೂತ ಜವಾಬ್ದಾರಿ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಗಳಿಗೆ ಇರಬೇಕು. ಅವರಿಗೆ ಸರಿಯಾದ ಮಾಹಿತಿ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ. ಅದು ಬಿಟ್ಟು ನಿಮ್ಮ ಮನೋರಂಜನೆಗಾಗಿ, ಜನಪ್ರೀಯತೆಗಾಗಿ ನಮ್ಮ ಮನಸ್ಸುಗಳನ್ನು ಒಡೆಯಬೇಡಿ. ರಾಷ್ಟ್ರೀಯ ದುರಂತದ ಸಮಯದಲ್ಲಿ ಜವಾಬ್ದಾರಿಯಿಂದ ವರ್ತಿಸಿ. ದಯವಿಟ್ಟು ಇದನ್ನು ನಿಲ್ಲಿಸಿ”, ಎಂದು ಕುಲ್ ದೀಪ್ ಭಟ್ ಮನವಿ ಮಾಡಿದ್ದಾರೆ.







