ಪಿಎಂ ಇಂಟರ್ನ್ಶಿಪ್ ಯೋಜನೆ ಆರಂಭದಲ್ಲಿ ವಿಳಂಬ: ಪರಿಷ್ಕೃತ ವೇಳಾಪಟ್ಟಿಗೆ ಕಾಯುತ್ತಿರುವ ಅರ್ಜಿದಾರರು

PC : rnbgujarat.org
ಹೊಸದಿಲ್ಲಿ: ಇಂದಿನಿಂದ ಆರಂಭಗೊಳ್ಳಬೇಕಿದ್ದ ಬಹು ನಿರೀಕ್ಷಿತ ಪ್ರಧಾನ ಮಂತ್ರಿ ಇಂಟರ್ನ್ಶಿಪ್ (ಅಲ್ಪಾವಧಿ ತರಬೇತಿ) ಯೋಜನೆ (ಪಿಎಂಐಎಸ್)ಯು ವಿಳಂಬಗೊಂಡಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ businesstoday.in ವರದಿ ಮಾಡಿದೆ. ಪಿಎಂಐಎಸ್ ಆರಂಭಕ್ಕೆ ಹೊಸ ದಿನಾಂಕವನ್ನು ಅಧಿಕಾರಿಗಳು ಇನ್ನೂ ಪ್ರಕಟಿಸಿಲ್ಲವಾದರೂ ಯೋಜನೆಯು ಉದ್ಯಮಗಳು ಮತ್ತು ವಿದ್ಯಾರ್ಥಿಗಳಲ್ಲಿ ಗಮನಾರ್ಹ ಆಸಕ್ತಿಯನ್ನು ಮೂಡಿಸಿದೆ ಎಂದು ಹೇಳಿಕೊಂಡಿದ್ದಾರೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮಾಹಿತಿಯಂತೆ 280 ಕಂಪನಿಗಳಲ್ಲಿಯ 1,27,000 ಇಂಟರ್ನ್ಶಿಪ್ ಅವಕಾಶಗಳಿಗಾಗಿ 6.5 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ನ.10ಕ್ಕೆ ಅಂತ್ಯಗೊಳ್ಳಲಿದ್ದ ನೋಂದಣಿ ಅವಧಿಯನ್ನು ವ್ಯಾಪಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ನ.15ರವರೆಗೆ ವಿಸ್ತರಿಸಲಾಗಿತ್ತು.
ಏನಿದು ಪಿಎಂಐಎಸ್?:
ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು ಪ್ರಾಯೋಗಿಕ ಹಂತದಲ್ಲಿ ಇಂಧನ,ವಾಹನ,ಬ್ಯಾಂಕಿಂಗ್ ಮತ್ತು ಪ್ರವಾಸ ಸೇರಿದಂತೆ 24 ಕ್ಷೇತ್ರಗಳಲ್ಲಿ 125,000 ಇಂಟರ್ನ್ಶಿಪ್ಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಂಟರ್ನ್ಗಳಿಗೆ ಪ್ರಾಯೋಗಿಕ ಕೌಶಲ್ಯದಲ್ಲಿ ತರಬೇತಿ ನೀಡಲಾಗುತ್ತದೆ ಮತ್ತು ಈ ಅವಧಿಯಲ್ಲಿ ಅವರು ಮಾಸಿಕ 5,000 ರೂ.ಗಳ ಸ್ಟೈಫಂಡ್ ಪಡೆಯಲಿದ್ದಾರೆ. ಈ ಪೈಕಿ 4,500 ರೂ.ಗಳನ್ನು ಸರಕಾರವು ನೇರ ನಗದು ವರ್ಗಾವಣೆಯ ಮೂಲಕ ಪಾವತಿಸಲಿದ್ದು,ಉಳಿದ 500 ರೂ.ಗಳನ್ನು ಯೋಜನೆಯಲ್ಲಿ ಪಾಲ್ಗೊಳ್ಳುವ ಕಂಪನಿಗಳು ನೀಡಲಿವೆ.
ಐದು ವರ್ಷಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುವ ಯೋಜನೆಯು ಒಂದು ಕೋಟಿ ಯುವಜನರಿಗೆ ತರಬೇತಿಯನ್ನು ಒದಗಿಸಲಿದೆ.
ರಿಲಯನ್ಸ್ ಇಂಡಸ್ಟ್ರೀಸ್,ಟಾಟಾ ಕನ್ಸಲ್ಟನ್ಸಿ ಸರ್ವಿಸಸ್,ಮಾರುತಿ ಸುಝುಕಿ ಇಂಡಿಯಾ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಸೇರಿದಂತೆ ಹಲವಾರು ದೊಡ್ಡ ಕಂಪನಿಗಳು ಯೋಜನೆಯಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ.
ಲಭ್ಯವಿರುವ ಅವಕಾಶಗಳಿಗಿಂತ ತೀರ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಇಂಟರ್ನ್ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎನ್ನುವುದು ಸದ್ಯಕ್ಕೆ ಅಸ್ಪಷ್ಟವಾಗಿದೆ. ಅರ್ಜಿದಾರರು ಮತ್ತು ಉದ್ಯಮಗಳು ಯೋಜನೆಯ ಪರಿಷ್ಕೃತ ವೇಳಾಪಟ್ಟಿಗೆ ಸಂಬಂಧಿಸಿದಂತೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಮುಂದಿನ ಮಾಹಿತಿಗಾಗಿ ಕಾಯುತ್ತಿದ್ದಾರೆ.







