ಬಿಹಾರ: ಪ್ರಧಾನಿಯಿಂದ 13,000 ಕೋ.ರೂ.ಗೂ ಅಧಿಕ ವೆಚ್ಚದ ವಿವಿಧ ಯೋಜನೆಗಳ ಚಾಲನೆ

ಬೇಗುಸರಾಯಿ, ಆ. 22: ಪ್ರಧಾನಿ ನರೇಂದ್ರ ಮೋದಿ ಬಿಹಾರದ ಗಯಾಜಿ ಹಾಗೂ ಬೇಗುಸರಾಯ್ ಜಿಲ್ಲೆಗಳಲ್ಲಿ 13,000 ಕೋ.ರೂ.ಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಶುಕ್ರವಾರ ಉದ್ಘಾಟಿಸಿದರು.
ಪ್ರಧಾನಿ ಅವರು ಸುಮಾರು 6,880 ಕೋ.ರೂ. ಮೌಲ್ಯದ 600 ಮೆಗಾವ್ಯಾಟ್ ಬಾಕ್ಸರ್ ಉಷ್ಣ ವಿದ್ಯುತ್ ಸ್ಥಾವರ, ಪಾಟ್ನಾ ಜಿಲ್ಲೆಯ ಮೊಕಾಮವನ್ನು ಬೇಗುಸರಾಯಿಯೊಂದಿಗೆ ಜೋಡಿಸುವ ಗಂಗಾ ನದಿ ಮೇಲಿನ 1,870 ಕೋ.ರೂ.ಗೂ ಅಧಿಕ ಮೌಲ್ಯದ 1.86 ಕಿ.ಮೀ. ಉದ್ದದ ಔಂಟಾ ಸಿಮರಿಯಾ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು.
ಔಂಟಾ-ಸಿಮರಿಯಾ ಸೇತುವೆಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಅವರು ಸೇತುವೆಯ ಮೇಲೆ ನಿಂತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೈ ಹಿಡಿದುಕೊಂಡು ಜನರತ್ತ ಕೈ ಬೀಸಿದರು.
ಅವರು ಗಯಾಜಿ ಹಾಗೂ ದಿಲ್ಲಿ ನಡುವಿನ ಅಮೃತ ಭಾರತ್ ಎಕ್ಸ್ಪ್ರೆಸ್ ರೈಲು, ವೈಶಾಲಿ ಹಾಗೂ ಕೊಡೆರ್ಮಾ ನಡುವಿನ ಬುದ್ಧಿಸ್ಟ್ ಸರ್ಕ್ಯುಟ್ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಬಿಹಾರ್ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧುರಿ, ಹಲವು ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು ಕೂಡ ಗಯಾಜಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಧಾನಿ ಅವರು ಮುಝಪ್ಫರ್ಪುರದಲ್ಲಿ ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದರು. ನಮಾಮಿ ಗಂಗೆ ಯೋಜನೆ ಅಡಿ 520 ಕೋ.ರೂ.ಗೂ ಅಧಿಕ ಮೌಲ್ಯದಲ್ಲಿ ಮುಂಗೇರ್ನಲ್ಲಿ ನಿರ್ಮಾಣ ಮಾಡಲಾದ ತ್ಯಾಜ್ಯ ಸಂಸ್ಕರಣ ಘಟಕ (ಎಸ್ಟಿಪಿ) ಹಾಗೂ ತ್ಯಾಜ್ಯ ಜಾಲವನ್ನು ಉದ್ಘಾಟಿಸಿದರು.
ಇದಲ್ಲದೆ, ಪ್ರಧಾನಿ ಅವರು ಸುಮಾರು 1,260 ಕೋ.ರೂ. ಮೌಲ್ಯದ ನಗರ ಮೂಲ ಸೌಕರ್ಯ ಯೋಜನೆಗಳಿಗೆ ಸರಣಿ ಶಂಕು ಸ್ಥಾಪನೆ ಕೂಡ ನೆರವೇರಿಸಿದರು. ಇದರೊಂದಿಗೆ ಇನ್ನೂ ಹಲವು ಯೋಜನೆಗಳಿಗೆ ಪ್ರಧಾನಿ ಅವರು ಶಂಕು ಸ್ಥಾಪನೆ ನೆರವೇರಿಸಿದರು.







