ಆಪರೇಷನ್ ಸಿಂಧೂರ | ರಾಷ್ಟ್ರೀಯ ಭದ್ರತೆ ಕುರಿತು ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ಉನ್ನತ ಮಟ್ಟದ ಸಭೆ

Photo | PTI
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ಪ್ರಧಾನಿ ಮೋದಿ ಗುರುವಾರ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಭದ್ರತೆಗೆ ಸಂಬಂಧಿಸಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.
ನಾಗರಿಕ ರಕ್ಷಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು, ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿರ್ವಹಿಸುವುದು ಮತ್ತು ಮೂಲಸೌಕರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆಯ ಪ್ರಕಾರ, ಸಭೆಯಲ್ಲಿ ಸಚಿವಾಲಯಗಳ ನಡುವೆ ಸಮನ್ವಯತೆಗೆ ಪ್ರಧಾನಿ ಕರೆ ನೀಡಿದರು, ಅದೇ ರೀತಿ ಸಚಿವಾಲಯಗಳು ರಾಜ್ಯ ಅಧಿಕಾರಿಗಳು ಮತ್ತು ತಳಮಟ್ಟದ ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸುವಂತೆ ಸೂಚಿಸಿದರು.
ಕೇಂದ್ರ ಸಂಪುಟ ಕಾರ್ಯದರ್ಶಿ, ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳ ಜೊತೆಗೆ ರಕ್ಷಣಾ, ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸಚಿವಾಲಯಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಮ್ಮ ಯೋಜನೆಗಳು ಮತ್ತು ಸನ್ನದ್ಧತೆಯ ಬಗ್ಗೆ ಪ್ರಧಾನ ಮಂತ್ರಿಗೆ ವಿವರಿಸಿದರು.





