ವಸಾಹತುಶಾಹಿ ಮನಸ್ಥಿತಿಯಿಂದ ದೇಶವನ್ನು ಹೊರತಂದಿದ್ದೇವೆ: ಪ್ರಧಾನಿ ಮೋದಿ
► ಮೇರಾ ಭಾರತ್ ಮೇರಾ ದೇಶ್-ಅಮೃತ ಕಲಾಶ ಅಭಿಯಾನ ಸಮಾರೋಪ ► 'ಮೇರಾ ಯುವ ಭಾರತ್' ಜಾಲತಾಣ ಅನಾವರಣ

Photo : PTI
ಹೊಸದಿಲ್ಲಿ: ‘ಮೇರಾ ಮಾಟಿ ಮೇರಾ ದೇಶ್-ಅಮೃತ ಕಲಶ ಯಾತ್ರೆ’ಯ ಸಮಾರೋಪ ಸಮಾರಂಭ ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದಿದ್ದು, ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ‘ಮೇರಾ ಯುವ ಭಾರತ್ ಪೋರ್ಟಲ್’ಗೆ ಚಾಲನೆ ನೀಡಿದರು. ವಸಾಹತುಶಾಹಿಯ ಮನಸ್ಥಿತಿಯಿಂದ ದೇಶವನ್ನು ನಾವು ಹೊರತಂದಿದ್ದೇವೆ ಎಂದವರು ಹೇಳಿದರು.
ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆದ ‘ಮೇರಾ ಮಾಟಿ ಮೇರಾ ದೇಶ್’ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಅಮೃತ ಕಲಶಕ್ಕೆ ಮಣ್ಣನ್ನು ಸುರಿದರು.
‘ಅಝಾದಿ ಕಿ ಅಮೃತ ಮಹೋತ್ಸವ’ದ ಈ ಸುಸಂದರ್ಭದಲ್ಲಿ ದೇಶವು ರಾಜಪಥದಿಂದ ಕರ್ತವ್ಯಪಥದೆಡೆಗೆ ಸಾಗಿದೆಯೆಂದು ಪ್ರಧಾನಿ ಹೇಳಿದರು.
ಸರ್ದಾರ್ ಪಟೇಲ್ ಅವರ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಕರ್ತವ್ಯ ಪಥದಲ್ಲಿ ದೇಶವು ಐತಿಹಾಸಿಕ ಮಹಾಯಜ್ಞವೊಂದಕ್ಕೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದಂಡಿಯಾತ್ರೆ (ಉಪ್ಪಿನ ಸತ್ಯಾಗ್ರಹ)ಗಾಗಿ ಜನರು ಒಗ್ಗೂಡಿದಂತೆಯೇ, ಬೃಹತ್ ಪ್ರಮಾಣದ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಆಝಾದಿ ಕಿ ಅಮೃತ ಮಹೋತ್ಸವವು ಹೊಸ ಇತಿಹಾಸವನ್ನು ಬರೆದಿದೆ.
ಆಝಾದಿ ಕಿ ಅಮೃತ ಮಹೋತ್ಸವದೊಂದಿಗೆ ನಾವು ರಾಜಪಥದಿಂದ ಕರ್ತವ್ಯ ಪಥದೆಡೆಗೆ ಸಾಗಿದ್ದೇವೆ ಎಂದವರು ಮಾರ್ಮಿಕವಾಗಿ ಹೇಳಿದರು.
ಆಜಾದ್ ಹಿಂದ್ ಸರಕಾರದ ಮೊದಲ ಪ್ರಧಾನಿ ಪ್ರತಿಮೆಯು ಈಗ ಕರ್ತವ್ಯ ಪಥದಲ್ಲಿದೆ. ನಮ್ಮ ನೌಕಾಪಡೆಯು ಛತ್ರಪತಿ ಶಿವಾಜಿಯಿಂದ ಪ್ರೇರಿತವಾದ ನೂತನ ಲಾಂಛನವೊಂದನ್ನು ಹೊಂದಿದೆ. ಈಗ ಅಂಡಮಾನ್ ಹಾಗೂ ನಿಕೋಬಾರ್ನ ದ್ವೀಪಗಳು ಸ್ವದೇಶಿ ಹೆಸರುಗಳನ್ನು ಪಡೆದಿವೆ. ಈ ಅವಧಿಯಲ್ಲಿ ಮಾತ್ರವೇ ‘ಜನತೀಯ ಗೌರವ್ ದಿವಸ್’ ಹಾಗೂ ʼವೀರ ಬಾಲ್ ದಿವಸ್’ ಅನ್ನು ಘೋಷಿಸಲಾಗಿದೆ. ನಮ್ಮ ದೇಶವನ್ನು ನಾವು ವಸಾಹತುಶಾಹಿ ಮನಸ್ಥಿತಿಯಿಂದ ಹೊರಗೆ ತಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೇರಾ ಯುವ ಭಾರತ್ (ಮೈ ಭಾರತ್) ಪೋರ್ಟಲ್ ಅನ್ನು ಕೂಡಾ ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಇದು ಯುವಜನರ ನೇತೃತ್ವದ ಅಭಿವೃದ್ಧಿ ಬಗ್ಗೆ ಸರಕಾರವು ಗಮನಕೇಂದ್ರೀಕರಿಸಲು ನೆರವಾಗಲಿದೆ ಹಾಗೂ ಯುವಜನರನ್ನು ಅಭಿವೃದ್ಧಿಯ ‘ಸಕ್ರಿಯ ಚಾಲಕ’ರನ್ನಾಗಿ ರೂಪಿಸಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
‘ಸಾಮಾಜಿಕ ಬದಲಾವಣೆಯ ಮಧ್ಯವರ್ತಿಗಳಾಗುವಂತೆ ಹಾಗೂ ರಾಷ್ಟ್ರ ನಿರ್ಮಾತೃಗಳಾಗುವಂತೆ ಯುವಜನರನ್ನು ಪ್ರೇರೇಪಿಸುವುದೇ ಈ ಸ್ವಾಯತ್ತ ಸಂಸ್ಥೆಯ ಉದ್ದೇಶವಾಗಿದೆ. ಸರಕಾರ ಹಾಗೂ ಪೌರರ ನಡುವೆ ಯುವಸೇತುವಾಗಿ ಕಾರ್ಯಾಚರಿಸಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ತಿಳಿಸಿದೆ.
ಕೇಂದ್ರ ಸಚಿವರಾದ ಅಮಿತ್ ಶಾ,ಜಿ.ಕಿಶನ್ ರೆಡ್ಡಿ,ಅರ್ಜುನ್ ರಾಮ ಮೇಘವಾಲ್, ಅನುರಾಗ್ಠಾಕೂರ್ ಹಾಗೂ ಮೀನಾಕ್ಷಿ ಲೇಖಿ ಕೂಡಾ ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಮೃತ ಕಲಶ ಯಾತ್ರೆಗೆ ಸಾಂಸ್ಕೃತಿಕ ರಂಗು
ಅಮೃತಕಲಶವು ದೇಶದ ವಿವಿಧಭಾಗಗಳಿಂದ ಸಂಗ್ರಹಿಸಿದ ಮಣ್ಣನ್ನು ಒಳಗೊಂಡಿದೆ. ಆಝಾದಿ ಕಿ ಅಮೃತಮಹೋತ್ಸವದ ಸಮಾರೋಪ ಅಂಗವಾಗಿ ಶ್ರೀನಗರಿಂದ ತಿರುನಲ್ವೇಲಿವರೆಗೆ ಹಾಗೂ ಸಿಕ್ಕಿಂನಿಂದ ಸೂರತ್ವರೆಗೆ ಸಂಗ್ರಹಿಸಲಾದ ಮಣ್ಣುಗಳನ್ನು ಕರ್ತವ್ಯಪಥದಲ್ಲಿ ನಿರ್ಮಾಣವಾಗಲಿರುವ ಉದ್ಯಾನವನದಲ್ಲಿ ಮಿಳಿತಗೊಳಿಸಲಾಗುವುದು. ದೇಶದ ವಿವಿಧ ಭಾಗಗಳಿಂದ ಸಾಂಪ್ರದಾಯಿಕ ಉಡುಪುಗಳೊಂದಿಗೆ ಆಗಮಿಸಿದ ಜನರು ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನಕ್ಕೆ ವರ್ಣರಂಜಿತ ಮೆರುಗು ನೀಡಿದರು.
ದೇಶಾದ್ಯಂತ 700 ಜಿಲ್ಲೆಗಳ ಸಾವಿರಾರಾರು ತಹಶೀಲುಗಳಿಂದ ಆಗಮಿಸಿದ ಅಮೃತ ಕಲಶ ಯಾತ್ರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.







