ಮಣಿಪುರ ತಲುಪಿದ ಪ್ರಧಾನಿ ಮೋದಿ; 2023ರ ಹಿಂಸಾಚಾರದ ನಂತರ ಮೊದಲ ಭೇಟಿ

ಪ್ರಧಾನಿ ನರೇಂದ್ರ ಮೋದಿ (File Photo)
ಇಂಫಾಲ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಣಿಪುರಕ್ಕೆ ಆಗಮಿಸಿದರು. 2023ರಲ್ಲಿ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮಣಿಪುರಕ್ಕೆ ಆಗಮಿಸಿದ್ದಾರೆ.
ಇಂಫಾಲ ವಿಮಾನ ನಿಲ್ದಾಣದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಹಾಗೂ ಮುಖ್ಯ ಕಾರ್ಯದರ್ಶಿ ಪುನೀತ್ ಕುಮಾರ್ ಗೋಯಲ್ ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಮಣಿಪುರದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 8,500 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಫಾಲ ಮತ್ತು ಚೂರಚಂದ್ ಪುರ್ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
ಇಂಫಾಲದಲ್ಲಿನ 237 ಎಕರೆಯ ಕಾಂಗ್ಲಾ ಕೋಟೆ ಮತ್ತು ಚೂರಚಂದ್ ಪುರ್ನ ಶಾಂತಿ ಮೈದಾನದಲ್ಲಿ ಪ್ರಧಾನಿ ಸಮಾವೇಶಗಳ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಭದ್ರತಾ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.
ಶುಕ್ರವಾರ ಬಿಡುಗಡೆಯಾದ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಕಟಣೆಯ ಪ್ರಕಾರ, “ಮಣಿಪುರದ ಸಮಗ್ರ, ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಸಾಧಿಸಲು, ಪ್ರಧಾನಿಯವರ ದೃಷ್ಟಿಕೋನದ ಅಂಗವಾಗಿ, ಚೂರಚಂದ್ ಪುರ್ ನಲ್ಲಿ 7,300 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಶಿಲಾನ್ಯಾಸ ನಡೆಯಲಿದೆ” ಎಂದು ತಿಳಿಸಿದೆ.







