ಟ್ರಂಪ್ ಹೇಳಿಕೆಗೆ ಪ್ರಧಾನಿ ಮೋದಿ ಮೌನಿ ಬಾಬಾ ಆಗುತ್ತಾರೆ : ತೈಲ ಖರೀದಿ ಕುರಿತು ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ವ್ಯಂಗ್ಯ

Photo | PTI
ಹೊಸದಿಲ್ಲಿ, ಅ.18: ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಒಪ್ಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಛರಿಸಿದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ತೀವ್ರ ಟೀಕೆ ವ್ಯಕ್ತಪಡಿಸಿದೆ.
ಕಾಂಗ್ರೆಸ್ ನ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, “ಟ್ರಂಪ್ ಅವರು ಭಾರತ ರಷ್ಯಾದಿಂದ ತೈಲ ಆಮದು ಕಡಿಮೆ ಮಾಡುವುದಾಗಿ ಹೇಳಿದೆ ಎಂದು ಹೇಳಿದಾಗಲೆಲ್ಲಾ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ‘ಮೌನಿ ಬಾಬಾ’ ಆಗುತ್ತಾರೆ,” ಎಂದು ವ್ಯಂಗ್ಯವಾಡಿದ್ದಾರೆ.
ಟ್ರಂಪ್ ಇತ್ತೀಚೆಗೆ, “ನಾನು ಆಪರೇಷನ್ ಸಿಂಧೂರ್ ನಿಲ್ಲಿಸಿದ್ದೇನೆ. ನನ್ನ ಸ್ನೇಹಿತ ಮೋದಿ ರಷ್ಯಾದಿಂದ ತೈಲ ಖರೀದಿಯನ್ನು ಕಡಿಮೆ ಮಾಡುವ ಭರವಸೆ ನೀಡಿದ್ದಾರೆ,” ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಕೇಂದ್ರ ಸರಕಾರದ ವಿದೇಶಾಂಗ ನೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪ್ರತಿಕ್ರಿಯೆ ನೀಡುತ್ತಾ, “ಭಾರತದ ಇಂಧನ ನೀತಿಗಳು ಸಂಪೂರ್ಣವಾಗಿ ರಾಷ್ಟ್ರೀಯ ಹಿತಾಸಕ್ತಿಯಿಂದ ಪ್ರೇರಿತವಾಗಿವೆ. ಭಾರತೀಯ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಮುಖ್ಯ ಆದ್ಯತೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮೋದಿ, ಟ್ರಂಪ್ ಅವರ ಒತ್ತಡಕ್ಕೆ ಮಣಿದು ಪ್ರಮುಖ ನಿರ್ಧಾರಗಳನ್ನು ಅಮೆರಿಕದ ಇಚ್ಛೆಯಂತೆ ಕೈಗೊಳ್ಳುತ್ತಿದ್ದಾರೆ. “ಮೋದಿ ಟ್ರಂಪ್ ಬಗ್ಗೆ ಭಯಭೀತರಾಗಿದ್ದಾರೆ, ಇದು ದೇಶದ ಗೌರವಕ್ಕೆ ಧಕ್ಕೆಯಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಇದಲ್ಲದೆ, ಏಪ್ರಿಲ್–ಸೆಪ್ಟೆಂಬರ್ 2025ರ ಅವಧಿಯಲ್ಲಿ ಚೀನಾದೊಂದಿಗಿನ ಭಾರತದ ವ್ಯಾಪಾರವು USD 54.4 ಬಿಲಿಯನ್ಗೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
ಅಮೆರಿಕ ಇತ್ತೀಚೆಗೆ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸಿದೆ. ಈ ಕ್ರಮವನ್ನು ಭಾರತ ಅಸಮಂಜಸ ಎಂದು ಖಂಡಿಸಿದೆ.







