ಮಹಿಳಾ ಮೀಸಲಾತಿ ಜಾರಿಯನ್ನು ಬೆಂಬಲಿಸುವಂತೆ ಕೋರಿ ರಾಜಕೀಯ ಪಕ್ಷಗಳಿಗೆ ಪ್ರಧಾನಿ ಮೋದಿ ಪತ್ರ

ನರೇಂದ್ರ ಮೋದಿ | Photo Credit : PTI
ಹೊಸದಿಲ್ಲಿ, ಎ.12: ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದು 2029ರ ವೇಳೆಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಖಚಿತಪಡಿಸಲು ‘ಸಾಮೂಹಿಕ ಕ್ರಮ’ಕ್ಕೆ ಕರೆ ನೀಡಿದ್ದಾರೆ.
‘ಎ.16ರಿಂದ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಚರ್ಚೆಯು ಸಂಸತ್ತಿನಲ್ಲಿ ನಡೆಯಲಿದೆ. ಈ ವಿಶೇಷ ಅಧಿವೇಶನವು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಗೊಳಿಸಲು ಅವಕಾಶವಾಗಿದೆ’ ಎಂದು ಮೋದಿ ಶನಿವಾರ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಪ್ರಗತಿ ಸಾಧಿಸಲು, ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಪ್ರಮುಖವಾಗಿ ನೇತೃತ್ವ ವಹಿಸಲು ಅವಕಾಶವಿದ್ದಾಗ ಮಾತ್ರ ಯಾವುದೇ ಸಮಾಜವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದ್ದಾರೆ. ಬಾಹ್ಯಾಕಾಶದಿಂದ ಕ್ರೀಡೆ ಮತ್ತು ಸಶಸ್ತ್ರ ಪಡೆಗಳಿಂದ ಸ್ಟಾರ್ಟ್ಅಪ್ಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆಯು ಅವರ ಸಾಮರ್ಥ್ಯವನ್ನು ತೋರಿಸಿದೆ ಎಂದು ಹೇಳಿದ್ದಾರೆ.
ನಾರಿ ಶಕ್ತಿ ವಂದನ ಅಧಿನಿಯಮವನ್ನು 2023ರಲ್ಲಿ ಬಹುತೇಕ ಸರ್ವಾನುಮತದ ರಾಜಕೀಯ ಬೆಂಬಲದೊಂದಿಗೆ ಅಂಗೀಕರಿಸಲಾಗಿತ್ತು. ಅದು ಸಂಸತ್ತಿನಲ್ಲಿ ಒಮ್ಮತದ ಅಪರೂಪದ ಘಳಿಗೆಯಾಗಿತ್ತು ಎಂದು ಮೋದಿ ಹೇಳಿದ್ದಾರೆ.
ವ್ಯಾಪಕ ಚರ್ಚೆಗಳ ಬಳಿಕ ಈ ಅಧಿನಿಯಮವನ್ನು ಅದರ ನಿಜವಾದ ಅರ್ಥದಲ್ಲಿ ದೇಶಾದ್ಯಂತ ಜಾರಿಗೊಳಿಸುವ ಸಮಯ ಬಂದಿದೆ. 2029ರ ಚುನಾವಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸಬೇಕು ಎಂದಿದ್ದಾರೆ.
ಸಂಸತ್ತಿನಲ್ಲಿ ಒಮ್ಮತದ ನಿರ್ಧಾರ ಹೊರಬೀಳುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಮೋದಿ, ‘ನಾವೆಲ್ಲರೂ ಒಗ್ಗೂಡಿ ಈ ಐತಿಹಾಸಿಕ ಸಾಧನೆಯನ್ನು ಮಾಡುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಈ ಕ್ರಮ ಆಡಳಿತದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಲಿಷ್ಠ ಹೆಜ್ಜೆಯಾಗಿದೆ’ ಎಂದಿದ್ದಾರೆ.
► ಬಿಜೆಪಿಯಿಂದ ಸಚೇತಕಾಜ್ಞೆ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯ ತ್ವರಿತ ಅನುಷ್ಠಾನಕ್ಕಾಗಿ ಎ.16ರಿಂದ ಎ.18ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿ ಬಿಜೆಪಿ ತನ್ನ ಸಂಸದರಿಗೆ ಸಚೇತಕಾಜ್ಞೆ ಹೊರಡಿಸಿದೆ.
►ಅಧಿವೇಶನದ ಉದ್ದೇಶ
ನಾರಿ ಶಕ್ತಿ ವಂದನ ಅಧಿನಿಯಮವು 2023ರಲ್ಲಿ ಅಂಗೀಕಾರಗೊಂಡಿದ್ದರೂ ಕ್ಷೇತ್ರ ಪುನರ್ವಿಂಗಡಣೆ ಮತ್ತು ಹಾಲಿ ನಡೆಯುತ್ತಿರುವ ಜನಗಣತಿ ಪೂರ್ಣಗೊಂಡ ಬಳಿಕವೇ ಜಾರಿಗೊಳ್ಳಲಿದೆ.
ಗುರುವಾರ ಕೇಂದ್ರ ಸಂಪುಟವು 2029ರ ಲೋಕಸಭಾ ಚುನಾವಣೆಗೆ ಮುನ್ನ ಮೀಸಲಾತಿ ಜಾರಿಗಾಗಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಆಯೋಗದ ಸ್ಥಾಪನೆಗಾಗಿ ವಿಶೇಷ ಅಧಿವೇಶನದಲ್ಲಿ ಎರಡು ಮಸೂದೆಗಳ ಮಂಡನೆಗೆ ಅನುಮೋದನೆ ನೀಡಿದೆ.
►ಪ್ರತಿಪಕ್ಷದ ಆಕ್ಷೇಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶೇಷ ಅಧಿವೇಶನದ ಸಮಯ ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅದನ್ನು ಕರೆದಿರುವುದನ್ನು ಪ್ರಶ್ನಿಸಿದ್ದಾರೆ.
‘ಕಾಯ್ದೆ ಅಂಗೀಕಾರವಾಗಿ 30 ತಿಂಗಳುಗಳಾಗಿದ್ದರೂ ಈಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ’ ಎಂದು ಖರ್ಗೆ ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ಸರಕಾರವು ಕ್ಷೇತ್ರ ಪುನರ್ವಿಂಗಡಣೆ ಕುರಿತು ಯಾವುದೇ ವಿವರಗಳನ್ನು ಬಹಿರಂಗಗೊಳಿಸದೆ ಮತ್ತೆ ನಮ್ಮ ಸಹಕಾರವನ್ನು ಕೋರುತ್ತಿದೆ’ ಎಂದಿರುವ ಅವರು, ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲದೆ ಉಪಯುಕ್ತ ಚರ್ಚೆ ಅಸಾಧ್ಯ ಎಂದು ಹೇಳಿದ್ದಾರೆ.






